ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಕೊರೊನಾ ವಾರಿಯರ್ಸ್ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲದರ ಮಧ್ಯೆ ನಿನ್ನೆ ರಾತ್ರಿ ಸೀಲ್‌ಡೌನ್ ಆದ ಬೆಂಗಳೂರಿನ ಪಾದರಾಯನಪುರ ವಾರ್ಡ್ ನಲ್ಲಿ ನೂರಾರು ಕಿಡಿಗೇಡಿಗಳು ಬ್ಯಾರಿಕೇಡ್ ಹಾಗೂ ಕಬ್ಬಿಣದ ತಗಡುಗಳನ್ನು ಕಿತ್ತೆಸೆದು ದಾಂಧಲೆ ನಡೆಸಿದ್ದಾರೆ. ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 58 ಶಂಕಿತರನ್ನು ಕ್ವಾರಂಟೈನ್‌ನಲ್ಲಿಡಲು ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ಭಾನುವಾರ ಸ್ಥಳಕ್ಕೆ ತೆರಳಿದ ವೇಳೆ ಉದ್ರಿಕ್ತ ಗುಂಪು ಪೊಲೀಸರಿಗೇ ಸವಾಲು ಹಾಕಿ ಅಟ್ಟಹಾಸ ಮಾಡಿದೆ.
ಈಗಾಗಲೇ ವಾರ್ಡ್ ನಲ್ಲಿ11 ಮಂದಿ ಕೋವಿಡ್-19 ಸೋಂಕಿತರಿದ್ದು, ಅವರೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದ 58 ಜನರ ಜನರ ಪೈಕಿ 20 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಉಳಿದವರನ್ನು ಕ್ವಾರಂಟೈನ್‌ನಲ್ಲಿಡಲು ಮುಂದಾದಾಗ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಏಕಾಏಕಿ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿದ್ದ ಕುರ್ಚಿಗಳನ್ನು ಎಸೆದು, ಪೆಂಡಾಲ್ ಕಿತ್ತು ಹಾಕಿದ್ದಾರೆ. ಸ್ಥಳದಲ್ಲಿ ಕೆಲವೇ ಪೊಲೀಸ್ ಸಿಬ್ಬಂದಿ ಇದ್ದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ.
”ನಮ್ಮಲ್ಲಿಹೊಸದಾಗಿ ಯಾರಿಗೂ ಸೋಂಕು ತಗುಲಿಲ್ಲ. ಸುಖಾಸುಮ್ಮನೆ ನಮ್ಮನ್ನೆಲ್ಲಾ ಎಳೆದುಕೊಂಡು ಹೋಗಿ ಕೂಡಿ ಹಾಕುತ್ತಿದ್ದಿರಿ,” ನಮಗೆ ಹೊರಗೆ ಹೋಗಲಾಗುತ್ತಿಲ್ಲ. ಊಟ ಸಿಗುತ್ತಿಲ್ಲ ಎಂದು ಆರೋಪಿಸಿ ಎಂಟರಿಂದ ಹತ್ತು ಮಂದಿ ಬಿಬಿಎಂಪಿ ಅಧಿಕಾರಿಗಳ ಜತೆ ಮೊದಲು ವಾಗ್ವಾದಕ್ಕೆ ಇಳಿದಿದ್ದಾರೆ. ಅಲ್ಲದೆ ಆರೋಗ್ಯಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ನೂರಾರು ಮಂದಿ ಜಮಾಯಿಸಿ ದಾಂಧಲೆ ನಡೆಸಿದ್ದಾರೆ. ಈ ವೇಳೆ ಪಾಲಿಕೆ ಸಿಬ್ಬಂದಿ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ರಾತ್ರಿ ವೇಳೆ ಅನಗತ್ಯ ಆತಂಕ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಅಲ್ಲಿಂದ ವಾಪಸ್ ತೆರಳಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಬಾಲಸುಂದರ್ ”ಒಟ್ಟು 58 ಜನರು ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದರು. ಇವರಲ್ಲಿ20 ಮಂದಿ ಕ್ವಾರಂಟೈನ್‌ಗೊಳಗಾಗಿದ್ದಾರೆ. ಉಳಿದವರು ನಮಗೆ ಸಹಕಾರ ನೀಡಿಲ್ಲ. ಶಾಸಕರು, ಪಾಲಿಕೆ ಸದಸ್ಯರು ಬರಬೇಕು. ನಮಗೆ ಕೊರೊನಾದ ಯಾವುದೇ ಲಕ್ಷಣ ಇಲ್ಲಎಂದು ಹೇಳಿದ್ದಾರೆ. ಇವರ ಮನವೊಲಿಸಲು ಸಾಧ್ಯವಾಗದ ಕಾರಣ ಸೋಮವಾರ ಬೆಳಗ್ಗೆ ಕ್ವಾರೆಂಟೈನ್ ಮಾಡಲು ಕ್ರಮ ತೆಗೆದುಕೊಳ್ಳುತ್ತೆವೆ,” ಎಂದು ಹೇಳಿದರು.
“ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ”
ಇನ್ನು ಘಟನೆ ಬಗ್ಗೆ ಬೆಂಗಳೂರು ನಗರ ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು. ದಯವಿಟ್ಟು ಯಾರೂ ಈ ವಿಷಯವನ್ನು ರಾಜಕೀಯಗೊಳಿಸಬಾರದು. ಸರಕಾರ, ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಕೊಡಬೇಕು. ಎಲ್ಲಾ ಶಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.








