ಹೊಸದಿಲ್ಲಿ, ಜೂನ್ 5 : ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಸಿದಿರುವ ದೇಶದ ಅರ್ಥಿಕತೆಗೆ ಚೇತರಿಕೆ ತುಂಬಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರುಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ, ಸಣ್ಣ ವ್ಯಾಪಾರಿಗಳಿಗೆ ನೆರವಾಗುವ ದೃಷ್ಟಿಯಿಂದ ಅನೇಕ ಅರ್ಥಿಕ ಸಹಾಯವನ್ನು ಘೋಷಿಸಿದೆ. ರೈತರಿಗೆ ಸಹಾಯಕವಾಗಲೆಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, ರೈತರ ಖಾತೆಗೆ 2,000 ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಕಂತನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿರುವ ಸರ್ಕಾರ ಇಲ್ಲಿಯವರೆಗೆ 19,350.84 ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ಜಮಾವಣೆ ಮಾಡಿದೆ.
ಒಂದು ವೇಳೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿಯಲ್ಲಿ ನಿಮ್ಮ ಖಾತೆಗೆ 2000 ರೂಪಾಯಿಗಳು ಬಂದಿರದಿದ್ದರೆ ಮುಂದಿನ ಹಂತದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಬಹುದು.
ಮುಂದಿನ ಹಂತದಲ್ಲೂ ಖಾತೆಗೆ ಹಣ ಬರದೇ ಇದ್ದಲ್ಲಿ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ
1. ಖಾತೆಗೆ ಹಣ ಬರದೇ ಇದ್ದ ಪಕ್ಷದಲ್ಲಿ ರೈತ ಮುಂದಿನ ಕಂತಿಗೆ ಕಾಯಬೇಕು.
2. ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ. ಆಧಾರ್ ಸಂಖ್ಯೆ ಅಥವಾ ಬೇರೆ ಯಾವುದಾದರೂ ವಿವರಗಳು ತಪ್ಪಾಗಿದ್ದರೆ ಖಾತೆಗೆ ಹಣ ಬರುವುದಿಲ್ಲ.
3. ಜಿಲ್ಲಾ ಕೃಷಿ ಅಧಿಕಾರಿಗಳಿಗೆ ಅಥವಾ ಲೆಕ್ಕಾಧಿಕಾರಿಗಳಿಗೆ ಮಾಹಿತಿ ನೀಡಬಹುದು.
4. ಕೇಂದ್ರ ಕೃಷಿ ಸಚಿವಾಲಯದ ಸಹಾಯವಾಣಿ ಸಂಖ್ಯೆ ಪಿಎಂ-ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ ಸಂಖ್ಯೆ 1800115526 ಗೆ ಕರೆ ಮಾಡುವ ಮೂಲಕ ಮಾಹಿತಿಯನ್ನು ನೀಡಬಹುದು.
5. ಕೃಷಿ ಸಚಿವಾಲಯಕ್ಕೆ 011-23381092 ಗೆ ಕರೆ ಮಾಡಿ, ಖಾತೆಗೆ ಹಣ ಜಮಾ ಆಗದಿರುವ ಬಗ್ಗೆ ದೂರು ಸಲ್ಲಿಸಬಹುದು.
6. ಪಿಎಂ ಕಿಸಾನ್ ಸಮ್ಮನ್ ವೆಬ್‌ಸೈಟ್ pmkisan.gov.in ಗೆ ಹೋಗಿ ಫಲಾನುಭವಿಗಳ ಪಟ್ಟಿಯ ಲಿಂಕ್ ಅನ್ನು ಕ್ಲಿಕ್ ಮಾಡಿ, ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರನ್ನು ನಮೂದಿಸಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು 1 ಡಿಸೆಂಬರ್ 2018 ರಂದು ಘೋಷಿಸಲಾಗಿದ್ದು, ಈ ಯೋಜನೆಯ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಪ್ರತಿ ರೈತನು 2000 ರೂಪಾಯಿಗಳನ್ನು 3 ಸಮಾನ ಕಂತುಗಳಂತೆ ವರ್ಷಕ್ಕೆ 6000 ರೂಪಾಯಿಗಳನ್ನು ಪಡೆಯುತ್ತಾನೆ.
2020-21 ರ ಅರ್ಥಿಕ ವರ್ಷದ ಮೊದಲ ಕಂತು ಏಪ್ರಿಲ್‌ನಲ್ಲಿಯೇ ರೈತರ ಖಾತೆಗೆ ವರ್ಗಾಯಿಸಲಾಗಿದೆ. ಇಲ್ಲಿಯವರೆಗೆ 19,350.84 ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ಜಮಾವಣೆ ಮಾಡಿದ್ದು, ಇದರಿಂದ 9 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ ಸಹಾಯವಾಗಿದೆ.








