ಇಲ್ಲಿ ನನ್ನ ಪಾತ್ರವೇನು..? ಭಾರತ ತಂಡದಲ್ಲಿ ಜಾವಗಲ್ ಶ್ರೀನಾಥ್‍ಗೆ ಹೀಗೆ ಅನ್ನಿಸಿದ್ದು ಯಾಕೆ ?
ಅದು 1990ರ ದಶಕ. ಕಪಿಲ್‍ದೇವ್, ಮನೋಜ್ ಪ್ರಭಾಕರ್ ಭಾರತ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಆಗಷ್ಟೇ ಬಿಸಿ ರಕ್ತದ ಹುಡುಗ ಜಾವಗಲ್ ಶ್ರೀನಾಥ್ ಅವರ ಎಂಟ್ರಿಯಾಗಿದ್ದು. ವೇಗ ಮತ್ತು ನಿಖರತೆಯೊಂದಿಗೆ ಬೌಲಿಂಗ್ ಮಾಡುತ್ತಿದ್ದ ಶ್ರೀನಾಥ್ ಭಾರತ ಕ್ರಿಕೆಟ್ ತಂಡದ ಭರವಸೆಯ ವೇಗದ ಬೌಲರ್ ಆಗುವಂತಹ ಎಲ್ಲಾ ಸೂಚನೆಗಳನ್ನು ನೀಡಿದ್ದರು.
ಆದ್ರೆ ಆಗ ಭಾರತ ಕ್ರಿಕೆಟ್ ತಂಡ ವೇಗದ ಬೌಲಿಂಗ್‍ಗಿಂತ ಹೆಚ್ಚಾಗಿ ಸ್ಪಿನ್ ಬೌಲರ್‍ಗಳನ್ನು ನೆಚ್ಚಿಕೊಂಡಿತ್ತು. ಆಗ ಶ್ರೀನಾಥ್ ಮನದಲ್ಲಿ ಮೂಡಿದ್ದ ಭಾವನೆಗಳನ್ನು ಇದೀಗ ಶೇರ್ ಮಾಡಿಕೊಂಡಿದ್ದಾರೆ. ಸ್ಪಿನ್ ಬೌಲರ್‍ಗಳ ಎದುರು ವೇಗದ ಬೌಲರ್‍ಗಳಿಗೆ ಬೆಲೆನೇ ಇರಲಿಲ್ಲ ಅನ್ನೋ ಭಾವನೆ ಕೂಡ ಮೂಡುವಂತಾಗಿತ್ತಂತೆ.
ನಾನು ಈ ಬಗ್ಗೆ ದೂರು ನೀಡುತ್ತಿಲ್ಲ. ಆದ್ರೆ ಆವಾಗ ಅಂತಹ ಪರಿಸ್ಥಿತಿ ಇತ್ತು. ಭಾರತದ ಟೆಸ್ಟ್ ತಂಡದಲ್ಲಿ ಆಗ ಒಬ್ಬ ವೇಗದ ಬೌಲರ್‍ನನ್ನು ಮಾತ್ರ ಆಡಿಸಲಾಗುತ್ತಿತ್ತು. ಇನ್ನುಳಿದಂತೆ ಮೂವರು ಸ್ಪಿನ್ ಬೌಲರ್‍ಗಳನ್ನು ಕಣಕ್ಕಿಳಿಸಲಾಗುತ್ತಿತ್ತು. 80ರಿಂದ 90ರಷ್ಟು ಸ್ಪಿನ್ ಬೌಲರ್‍ಗಳನ್ನು ಬಳಕೆ ಮಾಡಲಾಗುತ್ತಿತ್ತು. ಆಗ ನನಗೆ ಅನ್ನಿಸುತ್ತಿದ್ದದ್ದು ಇಲ್ಲಿ ನನ್ನ ಪಾತ್ರ ಏನು ಅಂತ. ಕೆಲವೊಂದು ಸಲ ನಾನೇ ನಾಯಕನ ಬಳಿ ಹೋಗಿ ಬೌಲಿಂಗ್ ಮಾಡಲು ಚೆಂಡನ್ನು ಕೊಡಿ ಅಂತ ಕೇಳುತ್ತಿದ್ದೆ. ಯಾಕಂದ್ರೆ 11ರ ಬಳಗದಲ್ಲಿದ್ದೇನೆ ಅನ್ನೋ ಸಮಾಧಾನಕ್ಕೋಸ್ಕರ ಅಂತ ಹೇಳಿಕೊಳ್ತಾರೆ ಜಾವಗಲ್ ಶ್ರೀನಾಥ್.
ಭಾರತದಲ್ಲಿ ಸ್ಪಿನ್ ಬೌಲರ್‍ಗಳು ಹೆಚ್ಚು ನೆರವಾಗುತ್ತಾರೆ. ಹಾಗಂತ ನಾನು ಆಶಾಭಾವನೆಯನ್ನು ಕಳೆದುಕೊಳ್ಳಲಿಲ್ಲ. ಯಾಕಂದ್ರೆ ಗೆಲ್ಲುವುದು ಮುಖ್ಯ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೆ. ಆದ್ರೆ ಈಗ ಪರಿಸ್ಥಿತಿ ಈಗ ಬದಲಾಗಿದೆ. ಈಗ ಮೂವರು ವೇಗಿಗಳು ಕಣಕ್ಕಿಳಿಯುತ್ತಿದ್ದಾರೆ ಎಂದು ಶ್ರೀನಾಥ್ ಹೇಳಿದ್ದಾರೆ.








