ಬೆಂಗಳೂರು : ರಾಜ್ಯ ಕಾಂಗ್ರೆಸ್ ಘರ್ ವಾಪಾಸಿಗೆ ಮುಂದಾಗಿದೆ. ಪಕ್ಷವನ್ನು ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಕೆಲಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈ ಹಾಕಿದ್ದಾರೆ. ಅಲ್ಲದೆ ಬೇರೆ ಪಕ್ಷದಲ್ಲಿ ಅಸಮಾಧಾನ ಹೊಂದಿದ್ದವರು ಕಾಂಗ್ರೆಸ್ ಸೇರಲು ಅವಕಾಶ ಮಾಡಿಕೊಡಲಾಗುತ್ತಿದೆ.
ಪಕ್ಷ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಕರೆತಂದು, ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಅಲ್ಲದೆ ಬಂದವರು ಯಾವುದೇ ಷರತ್ ಗಳನ್ನು ಹಾಕಬಾರದು ಎಂಬ ಸೂಚನೆಯನ್ನು ನೀಡಿದ್ದಾರೆ.
ಯಾರಿಗೆ ಮತ್ತೆ ಕಾಂಗ್ರೆಸ್ ಪಕ್ಷ ಮರಳಿ ಸೇರಲು ಆಸಕ್ತಿ ಇದ್ದಿಯೋ ಅಂತವರನ್ನು ಸಂಪರ್ಕ ಮಾಡಲು ಕೆಪಿಸಿಸಿಯಿಂದ ಸಮಿತಿಯೊಂದು ರಚನೆಯಾಗಿದೆ. ಈ ಸಮಿತಿಯಲ್ಲಿ ಹತ್ತು ಹಿರಿಯ ಕಾಂಗ್ರೆಸ್ ಮುಂಖಡರು ಇದ್ದಾರೆ. ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪಗೆ ಜವಾಬ್ದಾರಿ ನೀಡಲಾಗಿದೆ.
ಸಮಿತಿಯ ಸಂಚಾಲಕರಾಗಿ ಹಸನಬ್ವ ಸೇರಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಸಹಿತ ಇದ್ದಾರೆ. ಜೊತೆಗೆ ಮಾಜಿ ಶಾಸಕರು, ಮಾಜಿ ಸಂಸದರು ಈ ಸಮಿತಿ ಭಾಗವಾಗಿದ್ದಾರೆ. ಈ ಸಮಿತಿ ಪಕ್ಷಕ್ಕೆ ಬರುವವರನ್ನ ಸಂಪರ್ಕ ಮಾಡಿ ಕೆಪಿಸಿಸಿಗೆ ವರದಿ ನೀಡುವುದು ಇದರ ಕೆಲಸವಾಗಿದೆ
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಪಕ್ಷವನ್ನು ಬಿಟ್ಟು ಹೋದರು ಮತ್ತು ಬೇರೆ ಪಕ್ಷದ ನಾಯಕರು ನನ್ನನ್ನು ಭೇಟಿ ಮಾಡಿದ್ದಾರೆ. ನಾನು ಏಕಾಏಕಿಯಾಗಿ ತೀರ್ಮಾನ ಸೇರಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಸಮಿತಿಯೊಂದು ರಚನೆ ಮಾಡಿದ್ದೇವೆ. ಪಕ್ಷ ಸೇರಲು ಅರ್ಜಿ ಹಾಕಿದವರನ್ನು ಸಮಿತಿ ಸಂಪರ್ಕ ಮಾಡುತ್ತದೆ.
ಜೊತೆಗೆ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರ ಜೊತೆ ಸಮಿತಿ ಮಾತುಕತೆ ನಡೆಸುತ್ತದೆ. ಯಾರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದರೆ ಎಲ್ಲರ ಅಭಿಪ್ರಾಯ ಮುಖ್ಯ ಹಾಗಾಗಿ ಸಮಿತಿ ರಚನೆ ಮಾಡಲಾಗಿದೆ. ಯಾಕೆಂದರೆ ನನ್ನ ಅನುಕೂಲಕ್ಕಾಗಿ ಯಾರನ್ನು ಬೇಕಾದರೂ ಪಕ್ಷಕ್ಕೆ ಸೇರಿಸಿಕೊಳ್ಳ ಆಗುವುದಿಲ್ಲ.
ಎಲ್ಲರ ಅಭಿಪ್ರಾಯ ಪಡೆಯಬೇಕು. ಜೊತೆಗೆ ಬಂದವರು ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಳ್ಳಬೇಕು. ಅಲ್ಲದೆ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವ ಒಪ್ಪಬೇಕು. ಪಕ್ಷಕ್ಕೆ ಯಾರೇ ಸೇರಬೇಕಾದರೂ ಮೊದಲು ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಒಪ್ಪಬೇಕು. ಅದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಆ ಕೆಲಸವನ್ನು ಸಮಿತಿ ಮಾಡುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.








