ತಾಯಿನಾಡಿನ ರಕ್ಷಣೆಗಾಗಿ ನೀವು ತೋರಿದ ಶೌರ್ಯ ಮತ್ತು ಸಮರ್ಪಣೆಗೆ ಯಾವುದು ಸಾಟಿಯಲ್ಲ – ಪ್ರಧಾನಿ ಮೋದಿ
ಲೇಹ್, ಜುಲೈ 3: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಡಾಖ್ ಗೆ ಅಚ್ಚರಿಯ ಭೇಟಿ ನೀಡಿ, ಗಡಿ ಪ್ರದೇಶದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಸೇನಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಯಿನಾಡಿನ ರಕ್ಷಣೆಗಾಗಿ ನೀವು ತೋರಿದ ಶೌರ್ಯ ಮತ್ತು ಸಮರ್ಪಣೆಗೆ ಯಾವುದು ಸಾಟಿಯಲ್ಲ. ಪ್ರತಿಯೊಬ್ಬ ಭಾರತೀಯರು ಮತ್ತು ರಾಷ್ಟ್ರವು ನಿಮ್ಮಿಂದಾಗಿ ಸುರಕ್ಷಿತವಾಗಿದ್ದಾರೆ.
ನೀವೆಲ್ಲರೂ ನಿಂತಿರುವ ಎತ್ತರದ ಶಿಖರಕ್ಕಿಂತ ನಿಮ್ಮ ಧೈರ್ಯವು ಹೆಚ್ಚಿದೆ. ನಿಮ್ಮ ಆತ್ಮವಿಶ್ವಾಸ, ದೃಢ ನಿಶ್ಚಯ ಮತ್ತು ನಂಬಿಕೆಯು ಇಲ್ಲಿನ ಶಿಖರಗಳಂತೆ ಸ್ಥಿರವಾಗಿದೆ. ಪ್ರತಿಯೊಬ್ಬ ಭಾರತೀಯರ ಮತ್ತು ಭಾರತದ ರಕ್ಷಣೆ ನಿಮ್ಮ ಕೈಯಲ್ಲಿದ್ದು, ನಮಗೆ ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಧಾನಿ ಹೇಳಿದರು.
ಇಂದು, ಭಾರತವು ನಿಮ್ಮೆಲ್ಲರ ಬಗ್ಗೆ ಮತ್ತು ರಾಷ್ಟ್ರಕ್ಕೆ ನಿಮ್ಮ ಕೊಡುಗೆಯ ಬಗ್ಗೆ ಮಾತನಾಡುತ್ತಿದೆ. ಭಾರತದ ಪ್ರತಿಯೊಂದು ಮನೆಯೂ ನಿಮ್ಮ ಶೌರ್ಯದ ಕಥೆಯನ್ನು ಪ್ರತಿಧ್ವನಿಸುತ್ತಿದೆ. ಪ್ರತಿಯೊಬ್ಬ ಭಾರತೀಯ ನಾಗರಿಕರು ನಿಮಗೆ ಬೆಂಬಲವಾಗಿ ನಿಂತಿದ್ದಾರೆ ಮತ್ತು ರಾಷ್ಟ್ರವು ನಿಮಗೆ ನಮಸ್ಕರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಶಾಂತಿ ಮತ್ತು ಸ್ನೇಹವೇ ಜಗತ್ತಿಗೆ ಉತ್ತಮವಾದುದು ಎಂದು ಎಲ್ಲರೂ ಒಪ್ಪುತ್ತಾರೆ, ಆದರೆ ಶಾಂತಿ ಎಂದರೆ ದೌರ್ಬಲ್ಯ ಎಂದರ್ಥವಲ್ಲ, ಹಾಗೆಯೆಂದು ನಂಬಬಾರದು. ಇಂದು ಭಾರತವು ಬೆಳೆಯುತ್ತಿದೆ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಿಂದೆಂದಿಗಿಂತಲೂ ಬಲಶಾಲಿಯಾಗಿದೆ. ಯಾವುದೇ ಯುದ್ಧವಾಗಲಿ, ಶಾಂತಿಯ ಸ್ಥಿತಿಯಾಗಲಿ, ನಮ್ಮ ಹೆಮ್ಮೆಯ ಸೈನಿಕರ ಶೌರ್ಯವನ್ನು ಇಡೀ ವಿಶ್ವ ನೋಡಿದೆ. ನಾವು ಮಾನವೀಯತೆಯ ಉದ್ಧಾರಕ್ಕಾಗಿ ಕೆಲಸ ಮಾಡಿದ್ದೇವೆ.
ಶಾಂತಿಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ರಾಷ್ಟ್ರವನ್ನು ನಿರ್ಮಿಸುತ್ತಿದ್ದೇವೆ ಮತ್ತು ಬಲಪಡಿಸುತ್ತಿದ್ದೇವೆ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ನಮ್ಮ ರಾಷ್ಟ್ರವನ್ನು ಬಲಪಡಿಸುವುದು ನಮ್ಮ ಹಕ್ಕು, ಮತ್ತು ನಾವು ಅದನ್ನು ಮುಂದುವರಿಸುತ್ತೇವೆ ಎಂದು ಮೋದಿ ಹೇಳಿದರು. ದೇಶದ ರಕ್ಷಣೆಯ ಬಗ್ಗೆ ಯೋಚಿಸುವಾಗ ನಾನು ಯಾವಾಗಲೂ ಇಬ್ಬರು ಮಾತೆಯರನ್ನು ನೆನೆಯುತ್ತೇನೆ. ಒಬ್ಬರು ಭಾರತ ಮಾತೆಯಾದರೆ ಮತ್ತೊಬ್ಬರು ನಿಮ್ಮಂತಹ ವೀರ ಯೋಧರನ್ನು ಹೆತ್ತ ಮಾತೆಯರು ಎಂದು ಪ್ರಧಾನಿ ಮೋದಿ ಹೇಳಿದರು.