ಚಿಕ್ಕಬಳ್ಳಾಪುರ : ಯಲಹಂಕ ಡೈರಿ ವೃತ್ತದ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡುವ ವಿಚಾರವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆ ಈ ಬಗ್ಗೆ ಸಂಸದ ಬಿ.ಎನ್ ಬಚ್ಚೇಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಟ್ರೇ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೀರ ಸಾವರ್ಕರ್ ರಾಷ್ಟ್ರವಾದಿ, ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರು, ಜೈಲುವಾಸ ಅನುಭವಿಸಿದವರು. ಅಂತಹವರ ಹೆಸರಿಟ್ಟರೆ ತಪ್ಪೇನಿದೆ. ವೀರ್ ಸಾವರ್ಕರ್ ಹೆಸರಿಡಬೇಕು ಅಂತ ನಾನು ಒತ್ತಾಯಿಸುತ್ತೇನೆ. ಕೆಲವರು ವಿನಾಕಾರಣ ವಿರೋಧ ಮಾಡ್ತಿದ್ದು, ಅದು ಅನಾವಶ್ಯಕ ವಿಚಾರ. ಇಡೀ ದೇಶದಲ್ಲಿ ಯಾರ ಹೆಸರನ್ನ ಎಲ್ಲಿ ಬೇಕಾದರೂ ಇಡಬಹುದು. ಆಯಾ ರಾಜ್ಯದವರ ಹೆಸರನ್ನ ಆಯಾ ರಾಜ್ಯದಲ್ಲಿಯೇ ಇಡಬೇಕು ಅಂತ ಏನಾದ್ರೂ ಇದೆಯಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಬಿಜೆಪಿಯಲ್ಲಿನ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಯಾವುದೇ ಬಣಗಳೂ ಇಲ್ಲ. ಅವರೇ ಸರಿ ಹೋಗ್ತಾರೆ. ಸಿಎಂ ಯಡಿಯೂರಪ್ಪನವರು ತಮ್ಮ ಮೂರೂವರೆ ವರ್ಷದ ಅವಧಿ ಸಂಪೂರ್ಣ ಸಿಎಂ ಆಗಿ ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಸಂಸದರು, ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಗಳ ಬಗ್ಗೆ ಮಾತನಾಡಿದರು. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತಮ ಕೆಲಸ ಮಾಡ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು








