ನವದೆಹಲಿ : ಯೋಗಿ ನಾಡಲ್ಲಿ ಕಾಂಗ್ರೆಸ್ ಬಾವುಟ ಹಾರಿಸ್ತಾರಾ ಜ್ಯೂ. ಇಂದಿರಾ..? ಎಂಬ ಪ್ರಶ್ನೆ ಇದೀಗ ರಾಜಕೀಯ ಪಡಸಾಲೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಉತ್ತರಪ್ರದೇಶ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಅಲ್ಲಿ ಕಾಂಗ್ರೆಸ್ ಬಾವುಟ ಯಾವುದೇ ಅಡ್ಡಿ ಆತಂಕಗಳಿಲ್ಲದೇ ವಿರಾಜಮಾನವಾಗಿ ರಾರಾಜಿಸುತ್ತಿತ್ತು. ಕಾಲ ಕಳೆದಂತೆ ಎಸ್ ಪಿ. ಬಿಎಸ್ ಪಿ ಯುಪಿಯಲ್ಲಿ ಗಟ್ಟಿಯಾಗಿ ನೆಲೆಯೂರಿ ಅಧಿಕಾರಕ್ಕೆ ಬಂದರೂ, ಒಂದಲ್ಲಾ ಒಂದು ರೀತಿಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಹಿಡಿತದಲ್ಲೇ ಇತ್ತು.
ಆದ್ರೆ 2013ರ ಲೋಕಸಭೆ ಚುನಾವಣೆಯಲ್ಲಿ ಈ ಕಾಂಗ್ರೆಸ್ ಭದ್ರಕೋಟೆಯನ್ನು ಮೋದಿ-ಶಾ ಜೋಡಿ ಛಿದ್ರ ಮಾಡಿ ಉತ್ತರಪ್ರದೇಶದಲ್ಲಿ ಕೇಸರಿ ಬಾವುಟವನ್ನು ಹಾರಿಸಿದರು. ಅದು ಯಾವ ಮಟ್ಟಿಗೆ ಅಂದರೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರುಗಳ ಸಮೇತ ಕಿತ್ತು ಬಿಸಾಡಿತು ಬಿಜೆಪಿ. ಅಂದಿನಿಂದ ಇಂದಿನ ವರೆಗೂ ಯುಪಿಯಲ್ಲಿ ಕೇಸರಿ ಬಾವುಟ ರಾರಾಜಿಸುತ್ತಲೇ ಇದೆ. ಕಟ್ಟಾ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸುತ್ತಿದ್ದಾರೆ.
ಯೋಗಿ ನಾಡಿಗೆ ಜ್ಯೂ ಇಂದಿರಾ ಎಂಟ್ರಿ..!
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ಲಕ್ನೋ ನಗರಕ್ಕೆ ತಮ್ಮ ವಾಸ ಸ್ಥಾನ ಬದಲಾಯಿಸುವ ಚಿಂತನೆ ಮಾಡಿದ್ದಾರೆ. ಇದು ಹಲವು ಊಹಾ ಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ಯುಪಿ ರಾಜಕಾರಣದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಪ್ರಿಯಾಂಕಾ ಗಾಂಧಿ ಲಕ್ನೋದಲ್ಲಿ ನೆಲೆಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ ಕೆಲವು ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ ”ಹಿರಿಯ ನಾಯಕರು ಲಕ್ನೌದಲ್ಲಿ ನೆಲೆಸಬೇಕು ಹಾಗೂ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಮುನ್ನಡೆಸಬೇಕು. ಉತ್ತರ ಪ್ರದೇಶದ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ಗೆ ಪುನರುಜ್ಜೀವನದ ಹಾದಿ ಸಿಗಲಿದೆ. ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿಯಾಗಿ ಘೋಷಿಸುವುದು ಸ್ಪಷ್ಟ ಉದ್ದೇಶವಾಗಿದೆ. ಪ್ರಿಯಾಂಕಾ ಲಕ್ನೌನಲ್ಲಿ ನೆಲೆಸಬೇಕು ಮತ್ತು ಪಕ್ಷವನ್ನು ಮುನ್ನಡೆಸಬೇಕು” ಎಂದು ಅಭಿಪ್ರಾಯ ಪಟ್ಟಿದ್ದಾರೆ.
2022ರ ಉತ್ತರ ಪ್ರದೇಶ ಚುನಾವಣೆಗಾಗಿ ಪ್ರಿಯಾಂಕಾ ಗಾಂಧಿ ಸಿದ್ಧತೆ ನಡೆಸಿದ್ದು ಲಕ್ನೋದಲ್ಲಿ ನೆಲೆಸಲು ನಿರ್ಧರಿಸಿದ್ದಾರೆ. ಪ್ರಿಯಾಂಕಾ ಚುನಾವಣೆಗೂ ಮುನ್ನ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು, ಹೆಚ್ಚು ಕಾಲ ಕಳೆಯುವ ಇಚ್ಛೆ ಹೊಂದಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಗೆ ಒಂದು ಬಲಿಷ್ಠವಾದ ತಳಹದಿ ನಿರ್ಮಿಸುವ ಉದ್ದೇಶದಿಂದ ಅವರು ಲಕ್ನೋಗೆ ಸ್ಥಳಾಂತರವಾಗುತ್ತಿದ್ದಾರೆ ಎಂದು ಹೇಳಲಾಗಿದೆ.








