ಸಚಿನ್ ತೆಂಡುಲ್ಕರ್… ಕ್ರಿಕೆಟ್ ಚರಿತ್ರೆಯಲ್ಲಿ ಈ ಹೆಸರಿನ ಬಗ್ಗೆ ಏನು ಹೇಳುವುದು ಕೂಡ ಬೇಕಾಗಿಲ್ಲ. ಸಚಿನ್ ಅನ್ನೋ ಹೆಸರೇ ಸಾಕು… ತನ್ನ ಕ್ರಿಕೆಟ್ ಬದುಕಿನಲ್ಲಿ ವಿಶ್ವ ಕ್ರಿಕೆಟ್ ನ ಅತಿರಥ -ಮಹಾರಥ ಬೌಲರ್‍ಗಳನ್ನು ದಂಗುಬಡಿಸಿರುವ ಸಚಿನ್ ವಿಶ್ವ ಕ್ರಿಕೆಟ್‍ನ ದಾಖಲೆಯ ಪುಟಗಳಲ್ಲಿ ಎಂದೆಂದಿಗೂ ರಾರಾಜಿಸುತ್ತಿದ್ದಾರೆ. ವಾಲ್ಸ್ಶ್, ಆಂಬ್ರೋಸ್, ವಕಾರ್, ವಾಸೀಮ್, ಗ್ಲೇನ್ ಮೆಕ್‍ಗ್ರಾಥ್, ಶೋಯಿಬ್ ಅಖ್ತರ್, ಬ್ರೇಟ್ ಲೀ, ಮುತ್ತಯ್ಯ ಮುರಳೀಧರನ್ ಹೀಗೆ ಘಟಾನುಘಟಿ ಬೌಲರ್‍ಗಳಿಗೆ ಸಿಂಹಸ್ವಪ್ನದಂತೆ ಕಾಡುತ್ತಿದ್ದರು.
ಅದ್ರಲ್ಲೂ ಸಚಿನ್ ಮತ್ತು ಶೋಯಿಬ್ ಅಖ್ತರ್ ನಡುವಿನ ಸ್ಪರ್ಧೆ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸುತ್ತಿತ್ತು. ರಾವಲ್ಪಿಂಡಿ ಖ್ಯಾತಿಯ ಅಖ್ತರ್ ಅವರ ಘಾತಕ ಚೆಂಡು ಮತ್ತು ಸಚಿನ್ ಅವರ ಗದೆಯಂತೆ ಝಳಪಿಸುವ ಬ್ಯಾಟ್ ನಡುವಿನ ಸಮರ ಕೂಡ ರೋಚಕತೆಯನ್ನು ಮೂಡಿಸುತ್ತಿತ್ತು. ಸಚಿನ್ ಅಖ್ತರ್‍ಗೆ ಕೆಲವೊಂದು ಬಾರಿ ವಿಕೆಟ್ ಒಪ್ಪಿಸಿದ್ರೂ ಅವರನ್ನು ದಂಡಿಸದೇ ಬಿಟ್ಟಿಲ್ಲ.
ಖಾಸಗಿ ಚಾನೆಲ್ ನ ಸಂದರ್ಶನವೊಂದರಲ್ಲಿ ಸಂಜಯ್ ಮಾಂಜ್ರೇಕರ್ ಜೊತೆ ಮಾತನಾಡಿದ ಶೋಯಿಬ್ ಅಖ್ತರ್, ಸಚಿನ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಚಿನ್ ವಿಶ್ವದ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಸಚಿನ್ ಬಗ್ಗೆ ನನಗೆ ಯಾವಾಗಲೂ ಗೌರವವಿದೆ. ನಾನು ತುಂಬಾನೇ ಗೌರವಿಸುವ ಬ್ಯಾಟ್ಸ್ ಮೆನ್ ಎಂದ್ರು. ಮೈದಾನದಲ್ಲಿ ಕೆಲವು ಬ್ಯಾಟ್ಸ್ ಮೆನ್‍ಗಳು ನನ್ನ ಜೊತೆ ಮಾತನಾಡುವುದಿಲ್ಲ. ಸಚಿನ್ ತೆಂಡುಲ್ಕರ್ ಕೂಡ ಅಷ್ಟೇ, ನನ್ನ ಜೊತೆ ಮಾತನಾಡಿ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ ಎಂದು ಅಖ್ತರ್ ಹೇಳಿದ್ದಾರೆ.
ಜನ ಹೇಳ್ತಾ ಇರುತ್ತಾರೆ. ನನ್ನ ಮತ್ತು ಸಚಿನ್ ನಡುವೆ ಸ್ಪರ್ಧೆ ಇದೆ ಅಂತ. ಆದ್ರೆ ನಾವು ಯಾವತ್ತೂ ಕೂಡ ಪರಸ್ಪರ ವಾಕ್ಸಮರ ನಡೆಸಿಲ್ಲ. ಅವರೊಬ್ಬ ಶ್ರೇಷ್ಠ ಬ್ಯಾಟ್ಸ್ ಮೆನ್ ಅಂತ ಗೌರವಕೊಡುತ್ತಿದೆ. ಜೊತೆಗೆ ಅತ್ಯುತ್ತಮ ಪ್ರತಿಸ್ಪರ್ಧಿ ಎಂಬ ಭಾವನೆಯೂ ನನ್ನಲ್ಲಿತ್ತು ಎಂದು ಸಚಿನ್ ಬಗ್ಗೆ ಅಖ್ತರ್ ಹೇಳಿದ್ರು. ಇದೇ ವೇಳೆ ಶೋಯಿಬ್ ಅಖ್ತರ್ 2006ರ ಫೈಸಲಾಬಾದ್ ಪಂದ್ಯವನ್ನು ನೆನಪಿಸಿಕೊಂಡ್ರು. ಸಚಿನ್ ಆ ಪಂದ್ಯದಲ್ಲಿ 14 ರನ್ ಗಳಿಸಿ ನನಗೆ ವಿಕೆಟ್ ಒಪ್ಪಿಸಿದ್ದರು. ಅಲ್ಲದೆ ಸಚಿನ್‍ಗೆ ನಾನು ತುಂಬಾನೇ ತೊಂದರೆ ಕೊಟ್ಟಿದ್ದೆ. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.
ಅಂದ ಹಾಗೇ, ಸಚಿನ್ ವಿಕೆಟ್ ಪಡೆಯಲು ನಾನು ಸಾಕಷ್ಟು ಶ್ರಮಪಟ್ಟಿದ್ದೆ. ಜೊತೆಗೆ ತಂತ್ರವನ್ನು ರೂಪಿಸಿದ್ದೆ. ಸಚಿನ್ ಆಗ ಟೆನ್ನಿಸ್ ಎಲ್ಬೋ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಹುಕ್ ಅಥವಾ ಪುಲ್ ಶಾಟ್ಸ್ ಹೊಡೆಯಲು ಅವರು ಕಷ್ಟಪಡುತ್ತಾರೆ ಅಂತ ನನಗೆ ಗೊತ್ತಿತ್ತು. ಅದಕ್ಕಾಗಿಯೇ ನಾನು ಬೌನ್ಸರ್ ಎಸೆತಗಳನ್ನು ಎಸೆಯುತ್ತಿದ್ದೆ. ಅಲ್ಲದೆ ವಿಕೆಟ್ ಕೂಡ ಪಡೆದೆ ಎಂದು ಆ ಫೈಸಲಾಬಾದ್ ಟೆಸ್ಟ್ ಪಂದ್ಯದ ಬಗ್ಗೆ ತಾನು ಮಾಡಿರುವ ತಂತ್ರವನ್ನು ಬಹಿರಂಗಪಡಿಸಿದ್ರು.








