ಇದು ಇಶಾಂತ್ ಶರ್ಮಾ ಅವರ ಕ್ರಿಕೆಟ್ ಜರ್ನಿ ಶುರುವಾಗುವುದಕ್ಕಿಂತ ಮುನ್ನ ದಿನ ನಡೆದಿದ್ದ ಘಟನೆ. ಬಹುಶಃ ಇಶಾಂತ್ ಶರ್ಮಾ ಕೂಡ ನಿರೀಕ್ಷೆ ಮಾಡಿರಲಿಲ್ಲ. ಯಾಕಂದ್ರೆ ಇಶಾಂತ್ ಶರ್ಮಾಗೆ ಆವಾಗ ಜಸ್ಟ್ 17 ವರ್ಷ. ಆಗಲೇ ಬಾಂಗ್ಲಾದೇಶದ ವಿರುದ್ಧ ಆಡುವ ಮೂಲಕ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಆದ್ರೆ ಏಕದಿನ ಪಂದ್ಯಕ್ಕೆ ಇನ್ನೂ ಎಂಟ್ರಿಯಾಗಲಿಲ್ಲ. ಹೀಗಾಗಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು,ಅದನ್ನು ಎದುರು ನೋಡುತ್ತಿದ್ದರು. ಈ ನಡುವೆ ಒಂದು ಅನಿರೀಕ್ಷಿತ ಕರೆ ಇಶಾಂತ್ ಶರ್ಮಾಗೆ ಅಚ್ಚರಿಯನ್ನುಂಟು ಮಾಡಿತ್ತು. ಜೊತೆಗೆ ಏಕದಿನ ಪಂದ್ಯಕ್ಕೆ ಆಡುವ ಅವಕಾಶವೂ ಸಿಕ್ಕಿತ್ತು.
ತಾನು ಏಕದಿನ ಪಂದ್ಯಕ್ಕೆ ಪದಾರ್ಪಣೆ ಹೇಗೆ ಮಾಡಿದ್ದೆ. ಆಗ ನೆಟ್ಸ್ ನಲ್ಲಿ ಏನಾಯ್ತು, ಸುಮ್ಮನೆ ನೆಟ್ಸ್ ನಲ್ಲಿ ನಿಂತು ನೋಡುತ್ತಿದ್ದ ನನ್ನನ್ನು ದ್ರಾವಿಡ್ ಯಾಕೆ ಪ್ರಶ್ನೆ ಮಾಡಿದ್ರು, ದ್ರಾವಿಡ್ ಏನು ಹೇಳಿದ್ರು, ಯಾರ ಶ್ಯೂ ಹಾಕೊಂಡು ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದೆ ಎಂಬುದನ್ನು ಮಯಾಂಕ್ ಅಗರ್ವಾಲ್ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ನಾನು ಮನೆಯಲ್ಲಿ ಆರಾಮವಾಗಿ ಕುಳಿತಿದ್ದೆ. ಆಗ ನನಗೆ ಒಂದು ಕರೆ ಬಂತು, (ಆಗ ಐರ್ಲೆಂಡ್ ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿ ನಡೆಯುತ್ತಿತ್ತು. ಆ ನಂತರ ಇಂಗ್ಲೆಂಡ್ ಸರಣಿ) ನೀನು ಈಗಲೇ ಐರ್ಲೆಂಡ್ ಬಂದು ಟೀಮ್ ಇಂಡಿಯಾವನ್ನು ಸೇರಿಕೊಳ್ಳಬೇಕು ಅಂತ. ಆದ್ರೆ ನನಗೆ ಅಚ್ಚರಿ ಒಂದು ಕಡೆಯಾದ್ರೆ ಮತ್ತೊಂದೆಡೆ ಖುಷಿ. ಈ ನಡುವೆ ಅಲ್ಲಿ ತುಂಬಾನೆ ಚಳಿ ಇದೆ ಎಂಬುದನ್ನು ತಿಳಿದಿದ್ದೆ. ಅಲ್ಲದೆ ಟೀಮ್ ಇಂಡಿಯಾದ ಆರೇಳು ಆಟಗಾರರು ಜ್ವರದಿಂದ ಬಳಲುತ್ತಿದ್ದರು. ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ಧೋನಿ, ಆರ್.ಪಿ.ಸಿಂಗ್ ಸೇರಿದಂತೆ ಆರೇಳು ಮಂದಿ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ನಾನು ಐರ್ಲೆಂಡ್ ನಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡೆ ಅಂತ ತಾನು ಹೇಗೆ ಏಕದಿನ ತಂಡಕ್ಕೆ ಆಯ್ಕೆಯಾದೆ ಎಂಬುದನ್ನು ಹೇಳಿಕೊಂಡ್ರು.
ನಾನು ಐರ್ಲೆಂಡ್ ನಲ್ಲಿ ತಂಡವನ್ನು ಸೇರಿಕೊಂಡೆ. ಅಲ್ಲಿ ನಾನು ನನ್ನ ಲಗೇಜ್ಗಾಗಿ ಕಾಯುತ್ತ ಇದ್ದೆ. ಕೊನೆಗೆ ನನ್ನ ಮ್ಯಾನೇಜರ್ಗೆ ಕರೆ ಮಾಡಿದ್ದೆ. ಆಗ ಮ್ಯಾನೇಜರ್ ಲಗೇಜ್ ಎಲ್ಲಾ ನಿನ್ನ ರೂಮ್ಗೆ ನೇರವಾಗಿ ಬರುತ್ತೆ ಅಂತ ಹೇಳಿದ್ದ. ಆಗ ನಾನು ವ್ಹಾ ಅಂತ ಉದ್ಗಾರವೆತ್ತಿದ್ದೆ. ನಮಗೆ ಈ ರೀತಿಯ ಸೌಲಭ್ಯಗಳು ಇದೆಯಾ ಅಂತ ಖುಷಿಯಾಯ್ತು.ಯಾಕಂದ್ರೆ ರಣಜಿ ಪಂದ್ಯಗಳ ವೇಳೆ ನಮ್ಮ ಲಗೇಜ್ಗಳನ್ನು ನಾವೇ ತೆಗೆದುಕೊಂಡು ಹೋಗಬೇಕಾಗಿತ್ತು ಎಂದು ಆ ಕ್ಷಣ ತನ್ನ ಮನದಲ್ಲಿ ಮೂಡಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ್ರಂತೆ.
ಸರಿ ಅಂತ ಟೀಮ್ ಇಂಡಿಯಾ ಆಟಗಾರರು ನೆಟ್ಸ್ ನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದರು. ನಾನು ಅವರು ಅಭ್ಯಾಸ ಮಾಡುತ್ತಿರುವುದನ್ನು ನೋಡ್ತಾ ನಿಂತಿದ್ದೆ. ಆಗ ನನ್ನ ಬಳಿ ಬಂದು, ಇಶಾಂತ್ ನೀನ್ಯಾಕೆ ಬೌಲಿಂಗ್ ಮಾಡುತ್ತಿಲ್ಲ ಅಂತ ಪ್ರಶ್ನೆ ಮಾಡಿದ್ದರು. ಆತಂಕಗೊಂಡ ಮೆಲ್ಲನೆಯ ಸ್ವರದಲ್ಲಿ ಏನೇನೋ ಹೇಳ್ತಾ ಇದ್ದೆ. ಆಗ ತಕ್ಷಣವೇ ಏನು ಅಂತ ದ್ರಾವಿಡ್ ಕೇಳಿದ್ದರು. ಆಗ ನಾನು ಹೇಳಿದ್ದೆ. ರಾಹುಲ್ ಭಾಯ್, ನನ್ನ ಲಗೇಜ್ ಇನ್ನೂ ಬಂದಿಲ್ಲ. ಆಗ ದ್ರಾವಿಡ್ ಇದ್ರ ಅರ್ಥ ಏನು ಅಂತ ಕೇಳಿದ್ದರು. ಅದಕ್ಕೆ ವಿಮಾನದಲ್ಲಿ ಹಾಕಿದ್ದೆ. ಆದ್ರೆ ನನ್ನ ಲಗೇಜ್ ಇನ್ನೂ ನನ್ನ ಕೈಸೇರಿಲ್ಲ ಅಂದೆ. ಮತ್ತೆ ದ್ರಾವಿಡ್ ಅವರದ್ದು ಪ್ರಶ್ನೆ. ಹಾಗಾದ್ರೆ ನಾಳೆ ಮ್ಯಾಚ್ ಹೇಗೆ ಆಡುತ್ತಿಯಾ ? ಈ ಪ್ರಶ್ನೆ ನನ್ನ ಮತ್ತಷ್ಟು ಆಘಾತಕ್ಕೀಡು ಮಾಡಿತ್ತು. ಅಚ್ಚರಿಯಂದ್ರೆ ನಾನು ನನ್ನ ಮೊದಲ ಪಂದ್ಯವನ್ನು ಜಹೀರ್ ಖಾನ್ ಅವರ ಶ್ಯೂ ಹಾಕೊಂಡು ಆಡಿದ್ದೆ ಎಂದು ಇಶಾಂತ್ ಶರ್ಮಾ ತನ್ನ ಬದುಕಿನ ಮೊದಲ ಏಕದಿನ ಪಂದ್ಯದ ಅನುಭವವನ್ನು ಹಂಚಿಕೊಂಡ್ರು.








