ಬೆಂಗಳೂರು : ಲಡಾಖ್ ಗಡಿಯಲ್ಲಿ ಭಾರತ – ಚೀನಾ ನಡುವೆ ಸಂಘರ್ಷ ನಡೆದ ಕಾರಣಕ್ಕೆ ಭಾರತದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಚೀನಾಕ್ಕೆ ಸಿಕ್ಕಿರುವ ಮಾರುಕಟ್ಟೆಯನ್ನು ಕಸಿದು ನಮ್ಮವರಿಗೆ ಕೊಡಲು ನಾನು ಸಿಎಂ ಆಗಿದ್ದಾಗ ಯೋಜನೆಯೊಂದನ್ನು ರೂಪಿಸಿದ್ದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್,ಡಿ. ಕುಮಾರಸ್ವಾಮಿ, ಚೀನಾ ಉತ್ಪನ್ನ ಬಹಿಷ್ಕರಿಸಿ ಎಂಬುದು ದೇಶದ ಆಶೋತ್ತರಗಳಲ್ಲಿ ಒಂದು. ಈ ಕೂಗು ಇತ್ತೀಚೆಗೆ ಹೆಚ್ಚು ಬಲಗೊಳ್ಳುತ್ತಿದೆ. ದೇಶದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಚೀನಾ ಉತ್ಪನ್ನಗಳಿಗೆ ನಮ್ಮ ಉತ್ಪನ್ನಗಳ ಮೂಲಕ ಸಡ್ಡು ಹೊಡೆಯಬೇಕೆಂಬ ಪರಿಕಲ್ಪನೆಯಡಿ 2018ರಲ್ಲಿ ‘Compete With China’ ಎಂಬ ಯೋಜನೆಯನ್ನು ನಾನು ಸಿಎಂ ಆದಾಗ ರೂಪಿಸಲಾಗಿತ್ತು.
‘Compete With China’ ಯೋಜನೆ ಜಾರಿಗೆ ತರಲು ನನ್ನ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಕಲಬುರ್ಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಬಳ್ಳಾರಿ, ತುಮಕೂರು, ಬೀದರ್ ಜಿಲ್ಲೆಗಳಲ್ಲಿ 9 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿತ್ತು.
ಸ್ಥಳೀಯರಿಗೆ ಉದ್ಯೋಗ ಒದಗಿಸುವುದು, ಚೀನಾಕ್ಕೆ ಸಿಕ್ಕಿರುವ ಮಾರುಕಟ್ಟೆಯನ್ನು ಕಸಿದು ನಮ್ಮವರಿಗೆ ಕೊಡುವುದು, ಆ ಮೂಲಕ ಚೀನಾ ಉತ್ಪನ್ನಗಳನ್ನು ಯಶಸ್ವಿಯಾಗಿ ಹೊರ ಹಾಕುವುದು ನನ್ನ ಉದ್ದೇಶವಾಗಿತ್ತು. ಆದರೆ, ಮೈತ್ರಿ ಸರ್ಕಾರದ ಈ ಯೋಜನೆಯನ್ನು ಇಂದಿನ ಸರ್ಕಾರ ಏನು ಮಾಡಿದೆ? ಮುಂದುವರೆಸಿಕೊಂಡು ಹೋಗಿದೆಯೋ ಇಲ್ಲವೋ ತಿಳಿಯದು.
ಗಡಿಯಲ್ಲಿ ಅಮಾಯಕರ ಬಲಿದಾನದ ನಂತರ ಕೆಲವರಿಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಜ್ಞಾನೋದಯವಾಗಿದೆ. ಆದರೆ, ನನ್ನ ಅಧಿಕಾರವಧಿಯಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಲಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ಘೋಷವಾಕ್ಯದಷ್ಟು ಸುಲಭವಲ್ಲ. ಅದಕ್ಕೆ ರಚನಾತ್ಮಕ ಯೋಜನೆಗಳು ಬೇಕು. ಮೈತ್ರಿ ಸರ್ಕಾರದ ಯೋಜನೆಗಳು ಅದಕ್ಕೆ ಮಾದರಿಯಾಗಿದ್ದವು ಎಂದು ಕುಮಾರಸ್ವಾಮಿ ಹೇಳಿದ್ದಾರೆ.








