ಬಳ್ಳಾರಿ : ಕೋವಿಡ್ ಕುರಿತ ಭ್ರಷ್ಟಾಚಾರದ ತನಿಖೆಗೆ ನಾವು ಆಗ್ರಹಿಸಿದ್ದೇವೆ. ಇವರು ತಪ್ಪು ಮಾಡದೇ ಇದ್ದಾಗ, ತನಿಖೆಗೆ ಯಾಕೆ ಹಿಂದೇಟು ಹಾಕುತ್ತಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ಕೊರೊನಾ ಇದ್ದಾಗ ನಮ್ಮಲ್ಲಿ ಪ್ರಕರಣಗಳು ಇರಲೇ ಇಲ್ಲಾ. ಈಗ ದೇಶ ಮತ್ತು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಲಾಕ್ ಡೌನ್ ಮಾಡುವ ಸಮಯದಲ್ಲಿ ಕೋವಿಡ್-19 ಕಂಟ್ರೋಲ್ ಇತ್ತು. ಲಾಕ್ ಡೌನ್ ಓಪನ್ ಆದಾಗ ಪ್ರಕರಣಗಳು ಹೆಚ್ಚಾದವು. ಲಾಕ್ ಡೌನ್ ವಾಪಸ್ ಪಡೆಯುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು.
ಲಾಕ್ ಡೌನ್ ನಲ್ಲಿ ಬಡವರಿಗೆ, ವಲಸೆ ಕಾರ್ಮಿಕರಿಗೆ ಊಟ ಸಿಗಲೇ ಇಲ್ಲಾ. ಆಹಾರದ ಕಿಟ್ ಗಳು ಕೂಡ ಹೆಚ್ಚು ಅವರಿಗೆ ಸೇರಲಿಲ್ಲ. ಜನರು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಕರ್ತವ್ಯ. ಆದರೆ ಸರ್ಕಾರ ಇದೇ ನೆಪ ಮಾಡಿಕೊಂಡು ಭ್ರಷ್ಟಾಚಾರ ಮಾಡಿದೆ. ಕೋವಿಡ್ ಕುರಿತ ಭ್ರಷ್ಟಾಚಾರದ ತನಿಖೆಗೆ ನಾವು ಆಗ್ರಹಿಸಿದ್ದೇವೆ. ಇವರು ತಪ್ಪು ಮಾಡದೇ ಇದ್ದಾಗ, ತನಿಖೆಗೆ ಯಾಕೆ ಹಿಂದೇಟು ಹಾಕುತ್ತಾರೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಬಿಜೆಪಿಯ ನೋಟಿಸ್ ಬಗ್ಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿಯ ರವಿಕುಮಾರ್ ಅವರು ನಮಗೆ ಲೀಗಲ್ ನೋಟಿಸ್ ನೀಡಿದ್ದಾರೆ. ವಿರೋಧ ಪಕ್ಷಗಳು ಆರೋಪ ಮಾಡುವಾಗ, ಅದಕ್ಕೆ ಲೀಗಲ್ ನೋಟಿಸ್ ಕೊಡಲು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಯಾರು..? ಹಾಗಾದರೆ ಅವರ ಬಿಜೆಪಿ ಪಕ್ಷಕ್ಕೂ ಪಾಲು ಹೋಗಿದೆಯೇ ಎಂದು ಪ್ರಶ್ನಿಸಿದರು. ಬಿಜೆಪಿ ಹೆದರಿಸುವ ಕೆಲಸ ಮಾಡುತ್ತಿದೆ. ಅವರು ಲೀಗಲ್ ನೋಟಿಸ್ ಕೊಟ್ಟರೆ, ನಾವು ಉತ್ತರ ಕೊಡ್ತೆವೆ ಎಂದರು.








