ಶೋಯಿಬ್ ಅಖ್ತರ್.. ಈ ಹೆಸರು ಕೇಳಿದಾಗ ಕಣ್ಣ ಮುಂದೆ ಹಾದು ಹೋಗುವುದು ಆ ದೃಶ್ಯಗಳು… ದೂರದಿಂದ ಶರವೇಗದಲ್ಲಿ ಓಡಿಕೊಂಡು ಬಂದು ಮಿಂಚಿನ ಗತಿಯಲ್ಲಿ ಎಸೆಸುವ ಆ ಬೆಂಕಿ ಎಸೆತಗಳು… ಅಬ್ಬಾ.. ಅಂದುಬಿಡಬೇಕು. ಕೆಲವೊಂದು ಸಲ ಪ್ರಚಂಡ ಬ್ಯಾಟ್ಸ್ ಮೆನ್ಗಳಿಗೆ ಕೂಡ ಶೋಯಿಬ್ ಅಖ್ತರ್ ಅವರ ಎಸೆತಗಳು ಕಣ್ಣಿಗೆ ಕಾಣುತ್ತಿರಲಿಲ್ಲ. ಕಣ್ಣು ಮುಚ್ಚಿಕೊಂಡು ಬ್ಯಾಟ್ ಬೀಸಿದವರು ಇದ್ದಾರೆ. ಸಿಡುಕು, ಸಂಭ್ರಮ, ವಿವಾದ ಹೀಗೆ ಒಂದು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುವ ಪಾಕ್ನ ಮಾರಕ ವೇಗಿ ಶೋಯಿಬ್ ಅಖ್ತರ್
ಇದೀಗ ಶೋಯಿಬ್ ಅಖ್ತರ್ ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ರಾವಲ್ಪಿಂಡಿ ಎಕ್ಸ್ ಪ್ರೆಸ್ ಖ್ಯಾತಿ ಶೋಯಿಬ್ ತನ್ನ 16ನೇ ವಯಸ್ಸಿನಲ್ಲೇ ರಿವರ್ಸ್ ಸ್ವಿಂಗ್ ಎಸೆತಗಳನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ ಎಂಬ ವಿಷ್ಯವನ್ನು ಹೇಳಿಕೊಂಡಿದ್ದಾರೆ. ಆಗ ನನ್ನ ಜೊತೆ ಕೆಲವರು ತಮಾಷೆಯಾಗಿ ಮಾತನಾಡುತ್ತಿದ್ದರು.
ವಾಸೀಮ್ ಅಕ್ರಂ ಮತ್ತು ವಕಾರ್ ಯೂನಸ್ ಅವರ ಸ್ಥಾನವನ್ನು ನೀನು ಹೇಗೆ ತುಂಬುತ್ತಿಯಾ ? ನಿನಗೇನು ಹುಚ್ಚು ಹಿಡಿದಿದೆಯಾ ? ಸಾವಿರಾರು ಬೌಲರ್ಗಳು ಬರುತ್ತಿದ್ದಾರೆ.. ಹೋಗುತ್ತಿದ್ದಾರೆ ಅಂತಿದ್ದಿದ್ದರು. ಆಗ ನಾನು ಅವರಿಗೆ ಹೇಳುತ್ತಿದ್ದೆ. ಇಲ್ಲ. ನಿಮಗೆ ಅರ್ಥವಾಗುವುದಿಲ್ಲ. ಯಾಕಂದ್ರೆ ಅವರೆಲ್ಲಾ ನನ್ನ ಹಾಗೇ ಇರಲ್ಲ. ಅದ್ರಲ್ಲೂ ನನ್ನ ವರ್ತನೆ ಅವರಲ್ಲಿಲ್ಲ ಎನ್ನುತ್ತಿದೆ.
ನಾನು ಓಡುತ್ತೇನೆ. ವಿಕೆಟ್ ತೆಗೆಯುತ್ತೇನೆ ಅಂತ ಅವರಲ್ಲಿ ಹೇಳಿದಾಗ ಹಾಗಾದ್ರೆ ನೀನು ಹೇಗೆ ವಿಕೆಟ್ ಪಡೆಯುತ್ತಿಯಾ ಅಂತ ಮರು ಪ್ರಶ್ನೆ ಕೇಳುತ್ತಿದ್ದರು. ಅದಕ್ಕೆ ನಾನು ವಿಕೆಟ್ ತೆಗೆಯುವ ಕಲೆಯನ್ನು ನಾನು ಕಲಿಯುತ್ತಿದ್ದೇನೆ. ನನ್ನ 16ನೇ ವಯಸ್ಸಿನಲ್ಲಿ ನೆಟ್ಸ್ ನಲ್ಲಿ ರಿವರ್ಸ್ ಸ್ವಿಂಗ್ ಬೌಲಿಂಗ್ ಮಾಡುತ್ತಿದ್ದೆ ಅಂತ ಶೋಯಿಬ್ ಅಖ್ತರ್ ಹೇಳಿದ್ದಾರೆ.
ನಾನು ಮನಸ್ಸಿನಿಂದ ಹೇಳುತ್ತಿದ್ದೇನೆ. ಸುಮಾರು ಎಂಟು ವೇಗದ ಬೌಲರ್ಗಳಿದ್ದರು. ಎಲ್ಲರೂ ನನಗಿಂತ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು. ಈಗ ಊಹಿಸಿಕೊಳ್ಳಿ. ನಾನು ಎಲ್ಲರನ್ನು ಮೀರಿಸಿದ್ದೆ. ಅಲ್ಲದೆ ವಾಸೀಮ್ ಮತ್ತು ವಕಾರ್ ಅವರನ್ನು ಮೀರಿಸಬೇಕಾಗಿತ್ತು. ಆಗ ನೀವು ಏನು ಮಾಡುತ್ತೀರಿ ? ಆದ್ರಿಂದ ನಾನು ಪ್ರತಿಯೊಬ್ಬರಿಂದ ಒಂದೊಂದು ಗುಣಗಳನ್ನು ಕಲಿತುಕೊಂಡೆ ಅಂತಾರೆ ಅಖ್ತರ್.
ಒಬ್ಬರಿಂದ ಓಡುವುದನ್ನು ಕಲಿತೆ. ಮತ್ತೊಬ್ಬರಿಂದ ಬೌಲಿಂಗ್ ಶೈಲಿಯನ್ನು ಕಲಿತೆ. ಇನ್ನೊಬ್ಬರಿಂದ ಯಶಸ್ಸಿನ ಉತ್ತುಂಗಕ್ಕೇರಲು ಏನು ಮಾಡಬೇಕು ಎಂಬುದನ್ನು ಅರಿತುಕೊಂಡೆ, ಮತ್ತೆ ಕೆಲವರಿಂದ ತರಬೇತಿ ಹಾಗೂ ಜಿಮ್ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡೆ. ಒಂದು ಬಾರಿ ಯಶಸ್ಸು ಸಾಧಿಸಿದಾಗ ನನ್ನ ಸಾಮಥ್ರ್ಯ ಏನು ಎಂಬುದು ಅವರಿಗೆ ಗೊತ್ತಾಗಿಬಿಟ್ಟಿತ್ತು. ನಾನೂ ಅದ್ಭುತಗಳನ್ನು ಮಾಡಬಹುದು ಅಂತ ಅರ್ಥ ಮಾಡಿಕೊಂಡಿದ್ದೇನೆ. ಒಂದು ವೇಳೆ ವಿವಾದದಿಂದ ದೂರವಿರುತ್ತಿರುತ್ತಿದ್ರೆ ನಾನು ಏನೋ ಆಗುತ್ತಿದೆ ಅಂತ ಶೋಯಿಬ್ ಅಖ್ತರ್ ಹೇಳಿದ್ದಾರೆ.








