ವಾಷಿಂಗ್ಟನ್ : ಉತ್ತರ ಕೊರಿಯಾ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಆರೋಗ್ಯ ಸ್ಥಿತಿ ಜಗತ್ತಿನ ಮಟ್ಟಿಗೆ ಅತ್ಯಂತ ದೊಡ್ಡ ಗುಟ್ಟಾಗಿ ಪರಿಣಮಿಸಿದೆ. ಅವರ ಆರೋಗ್ಯ ಸರಿಯಿಲ್ಲ ಎಂದಷ್ಟೇ ಹೇಳಲಾಗುತ್ತಿದೆ. ಆದರೆ ಎಲ್ಲಿದ್ದಾರೆ ಯಾವ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ಕಿಂಚಿತ್ತೂ ಸಿಗುತ್ತಿಲ್ಲ.
ಇದರ ಮಧ್ಯೆ ಕಿಮ್ ಜಾಂಗ್ ಉನ್ ಅವರು ಮೃತಪಟ್ಟಿದ್ದಾರೆ. ಆದರೆ ಅಧಿಕೃತ ಘೋಷಣೆ ಮಾಡುತ್ತಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ವು. ಇದೀಗ ಈ ಬಗ್ಗೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ಮಾತನಾಡಿದ್ದಾರೆ.
ನಿನ್ನೆ ವೈಟ್ ಹೌಸ್ನನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ರಂಪ್, ಕಿಮ್ ಜಾಂಗ್ ಉನ್ ಬದುಕಿದ್ದಾರೆ . ಅವರು ಆರಾಮಾಗಿ ಇರಲಿ ಎಂದು ಆಶಿಸುತ್ತೇನೆ. ನನಗೆ ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಮತ್ತು ಹೇಗಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇದೆ. ಆದರೆ ಅದನ್ನು ನಾನು ಹೇಳುವುದಕ್ಕೆ ಸಾಧ್ಯವಿಲ್ಲ ಎಂದರು. ಮೇಲಾಗಿ ಅವರ ಬಗ್ಗೆ ಸದ್ಯದಲ್ಲೆ ಎಲ್ಲಾ ಮಾಹಿತಿ ಹೊರಬರಲಿದೆ ಎಂದು ತಿಳಿಸಿದರು.
ಇನ್ನು ಏಪ್ರಿಲ್ 15ರಂದು ಕಿಮ್ ಜಾಂಗ್ ಉನ್ ಅವರ ತಾತನ ಹುಟ್ಟುಹಬ್ಬದ ವಾರ್ಷಿಕೋತ್ಸವ ಇತ್ತು. ಆದರೆ ಅದರಲ್ಲಿ ಕಿಮ್ ಅವರು ಪಾಲ್ಗೊಂಡಿರಲಿಲ್ಲ. ಏಪ್ರಿಲ್ 11ರಿಂದಲೇ ನಾಪತ್ತೆಯಾಗಿದ್ದ ಅವರು ಈ ಸಮಾರಂಭಕ್ಕೆ ಬರುತ್ತಾರೆ ಎಂಬ ನಂಬಿಕೆ ಇತ್ತು. ಯಾಕೆಂದರೆ 2011ರಲ್ಲಿ ಅವರು ಸರ್ವಾಧಿಕಾರಿ ಪಟ್ಟಕ್ಕೆ ಏರಿದಾಗಿನಿಂದಲೂ ತಮ್ಮ ತಾತನ ಹುಟ್ಟುಹಬ್ಬದ ಸಮಾರಂಭವನ್ನು ತಪ್ಪಿಸುತ್ತಿರಲಿಲ್ಲ. ಏ.15ರ ಕಾರ್ಯಕ್ರಮದಲ್ಲಿ ಅವರು ಗೈರಾದಾಗಿನಿಂದಲೂ ಹಲವು ರೂಮರ್ ಗಳು ಹರಡಲು ಶುರುವಾದವು.








