ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಲು ಯಾವ ಪದಕವನ್ನು ತರಬೇಕು – ಪ್ರಧಾನಿಗೆ ಸವಾಲು ಹಾಕಿದ ಸಾಕ್ಷಿ ಮಲಿಕ್
ಹೊಸದಿಲ್ಲಿ, ಅಗಸ್ಟ್ 22: ಒಲಿಂಪಿಕ್ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ವೇಟ್‌ಲಿಫ್ಟಿಂಗ್ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅವರು ಈಗಾಗಲೇ ಕ್ರಮವಾಗಿ 2016 ಮತ್ತು 2018 ರಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ರಾಜೀವ್ ಗಾಂಧಿ ಖೇಲ್ ರತ್ನ ಗೆದ್ದಿರುವ ಕಾರಣ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಗುವುದಿಲ್ಲ ಎಂದು ಕ್ರೀಡಾ ಸಚಿವಾಲಯ ಶುಕ್ರವಾರ ವಿವರಿಸಿದೆ.

ಆದರೆ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ 27 ವರ್ಷದ ಸಾಕ್ಷಿ ಮಲಿಕ್ ಅವರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಪಿಎಂ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದು, ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಲು ಯಾವ ಪದಕವನ್ನು ತರಬೇಕು ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ಕ್ರೀಡಾಪಟುಗಳು ಪ್ರತಿಯೊಂದು ಪದಕಗಳನ್ನು ಗೆಲ್ಲುವ ಕನಸು ಕಾಣುತ್ತಿರುತ್ತಾರೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸಾಕ್ಷಿ ಮಲಿಕ್ ತನ್ನ ಕುಸ್ತಿ ವೃತ್ತಿಜೀವನದಲ್ಲಿ ಅರ್ಜುನ ಪ್ರಶಸ್ತಿ ಎಂದಾದರೂ ಗೆಲ್ಲಲು ಸಾಧ್ಯವಿದೆಯೇ ಎಂದು ಕೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಮತ್ತು ಗೌರವಾನ್ವಿತ ಕ್ರೀಡಾ ಸಚಿವ ಕಿರೆನ್ ರಿಜಿಜು, ನನಗೆ ಖೇಲ್ ರತ್ನ ನೀಡಿ ಗೌರವಿಸಿದ್ದಕ್ಕೆ ಸಂತೋಷ ಮತ್ತು ಅದರ ಬಗ್ಗೆ ಹೆಮ್ಮೆ ಇದೆ. ಆದರೆ ಪ್ರತಿಯೊಬ್ಬ ಕ್ರೀಡಾಪಟು ಎಲ್ಲಾ ಪ್ರಶಸ್ತಿಗಳನ್ನು ಗೆಲ್ಲುವ ಕನಸು ಕಾಣುತ್ತಾರೆ. ಇದಕ್ಕಾಗಿ ಒಬ್ಬ ಕ್ರೀಡಾಪಟು ತನ್ನ ಜೀವವನ್ನು ಅಪಾಯಕ್ಕೆ ದೂಡುತ್ತಾರೆ. ಅರ್ಜುನ ಪ್ರಶಸ್ತಿ ವಿಜೇತರ ಹೆಸರಿನಲ್ಲಿ ನನ್ನ ಹೆಸರನ್ನು ನೋಡುವ ಕನಸು ನನಗೂ ಇದೆ. ಈ ಕುಸ್ತಿ ಜೀವನದಲ್ಲಿ, ಈ ಪ್ರಶಸ್ತಿಯನ್ನು ಗೆಲ್ಲುವ ಅದೃಷ್ಟ ನನಗೆ ಎಂದಿಗೂ ಇರುವುದಿಲ್ಲವೇ ಎಂದು ಸಾಕ್ಷಿ ಮಲಿಕ್ ಪ್ರಶ್ನಿಸಿದ್ದಾರೆ.








