ನವದೆಹಲಿ: ಭಾರತದ ಯಾವುದೇ ಪ್ರದೇಶದ ಪ್ರಜೆಯೂ ಕೂಡ ಇನ್ನುಮುಂದೆ ಜಮ್ಮು ಮತ್ತು ಕಾಶ್ಮೀರ, ಲಡಾಖ್‍ನಲ್ಲಿ ಇನ್ನುಮುಂದೆ ಜಮೀನು ಕೊಳ್ಳಬಹುದು.
ಕೃಷಿ ಭೂಮಿ ಹೊರತುಪಡಿಸಿ ವಾಣಿಜ್ಯ ಉದ್ದೇಶದ ಜಮೀನನ್ನು ಖರೀದಿಸಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರದ ಗೃಹ ಇಲಾಖೆ ಕಾನೂನಿಗೆ ತಿದ್ದುಪಡಿ ಮಾಡಿ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಕೇಂದ್ರದ ಈ ಆದೇಶ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ.
ಒಂದು ವರ್ಷದ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದು ವಿಧಿ 370 ವಾಪಸ್ ಪಡೆಯುವ ನಿರ್ಣಯವನ್ನು ಕೇಂದ್ರ ಸರ್ಕಾರ ಸಂಸತ್ತಿನ ಅನುಮೋದನೆ ಪಡೆಯನ್ನು ಪಡೆದಿತ್ತು. ಇದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದರು.
ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜನೆ ಮಾಡಿದ್ದ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡಿ ಜಮ್ಮು ಮತ್ತು ಕಾಶ್ಮೀರ, ಲಡಾಕ್‍ನನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ ವಿಭಾಗಿಸಿ ಆದೇಶ ಹೊರಡಿಸಿತ್ತು.

ಅಂದಿನಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ಕಲಂ 370 ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾಗಳು ರದ್ದಾಗಿದ್ದವು. ಇದರಿಂದ ದೇಶದ ಯಾವುದೇ ಮೂಲೆಯ ಪ್ರಜೆಯೂ ಸಹ ಕಣಿವೆ ರಾಜ್ಯದಲ್ಲಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿತ್ತು. ಆದರೆ, ಅಷ್ಟರಲ್ಲೇ ಹೆಮ್ಮಾರಿ ಕೊರೊನಾ ದೇಶಾದ್ಯಂತ ಅಟ್ಟಹಾಸ ಮೆರೆದ ಕಾರಣ ಭೂಮಿ ಖರೀದಿ ತಿದ್ದುಪಡಿ ಕಾಯ್ದೆಗೆ ಅಧಿಸೂಚನೆ ಹೊರಡಿಸುವುದು ವಿಳಂಬವಾಗಿತ್ತು. ಹೀಗಾಗಿ ಭೂಮಿ ಖರೀದಿಗೆ ಇದ್ದ ಕಾನೂನು ತೊಡಕಿಗೆ ಇತಿಶ್ರೀ ಹಾಡಿದೆ.
ಕಾಶ್ಮೀರದಲ್ಲಿ ಭೂಮಿ ಖರೀದಿ ಯಾಕೆ ಸಾಧ್ಯವಿರಲಿಲ್ಲ..?
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇದ್ದಾಗ ಅಲ್ಲಿ ಆ ರಾಜ್ಯದ ಹೊರಗಿನ ಯಾವ ಪ್ರಜೆಗೂ ಕೂಡ ಜಮೀನು ಕೊಳ್ಳಲು ಸಾಧ್ಯವಿರಲಿಲ್ಲ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಿವಾಸಿಗಳು ಮಾತ್ರ ಆ ಹಕ್ಕು ಹೊಂದಿದ್ದರು.
ಆದರೆ, ಕಳೆದ ವರ್ಷ 370ನೇ ವಿಧಿ ರದ್ದು ಮಾಡಿ ವಿಶೇಷ ಸ್ಥಾನಮಾನ ಹಿಂಪಡೆಯುವ ಮೂಲಕ ಕಾಶ್ಮೀರವನ್ನು ದೇಶದ ಇತರ ರಾಜ್ಯಗಳಂತೆ ಮುಕ್ತ ವ್ಯವಹಾರಕ್ಕೆ ತೆರೆದಿಡಲಾಗಿದೆ.

ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದ ನಂತರ ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದವು. ಭಾರತದಿಂದ ಪಾಕಿಸ್ತಾನದಿಂದ ಪ್ರತ್ಯೇಕಗೊಂಡಾಗ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಲಯ ಅಂದಿನ ಕಾಶ್ಮೀರದ ರಾಜ ಹರಿಸಿಂಗ್ ಪಟ್ಟು ಹಿಡಿದು ಕುಳಿತಿದ್ದರು.
ಪಾಕಿಸ್ತಾನಕ್ಕೆ ಸೇರಲು ಇಷ್ಟವಿರದ ಕಾಶ್ಮೀರದ ರಾಜ ಹರಿಸಿಂಗ್, ಭಾರತಕ್ಕೆ ವಿಲೀನಗೊಳಿಸಲು ಕೆಲ ಷರತ್ತುಗಳನ್ನು ಹಾಕಿದ್ದ. ಆತನ ಷರತ್ತುಗಳಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಿ 370 ಅಡಿ ವಿಶೇಷ ಸ್ಥಾನಮಾನ ನೀಡಲು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ದೇಶದ ಯಾವುದೇ ರಾಜ್ಯದ ಪ್ರಜೆಗಳು ಕಣಿವೆ ರಾಜ್ಯದಲ್ಲಿ ಭೂಮಿ ಖರೀದಿಸುವ ಅವಕಾಶ ರದ್ದುಪಡಿಸುವ ವಿಧಿ 370ಯನ್ನು ಜಾರಿಗೆ ತರಲಾಗಿತ್ತು.
ಆದರೆ, ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದರೂ, ಮುಂದೆ ಬಂದ ಯಾವ ಸರ್ಕಾರಗಳೂ ವಿಧಿ 370ಯನ್ನು ಮುಟ್ಟುವ ಗೋಜಿಗೆ ಹೋಗಿರಲಿಲ್ಲ.
2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚುನಾವಣಾ ಪ್ರಣಾಳಿಕೆ ಹಾಗೂ ಪ್ರಚಾರದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಮಾಡುವುದಾಗಿ ಭರವಸೆ ನೀಡಿತ್ತು.

ಆದರೆ, 5 ವರ್ಷಗಳ ಅವಧಿಯಲ್ಲಿ ಮೋದಿ ನೇತೃತ್ವದ ಸರ್ಕಾರ ವಿಶೇಷ ಸ್ಥಾನಮಾನ ರದ್ದುಪಡಿಸುವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ, ಕಳೆದ ವರ್ಷ ಅಂದರೆ, 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ದಿಗ್ವಿಜಯದೊಂದಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ವಿಧಿ 370ಗೆ ತಿದ್ದುಪಡಿ ತಂದು ಸಂಸತ್ತಿನ ಒಪ್ಪಿಗೆ ಜೊತೆಗೆ ರಾಷ್ಟ್ರಪತಿಗಳ ಅಂಕಿತ ಪಡೆಯುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು.
ಹೊಸ ಕಾಯ್ದೆಗೆ ಕಾಶ್ಮೀರಿ ಪಕ್ಷಗಳ ವಿರೋಧ
ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಭೂ ಕಾನೂನಿನ ಕ್ರಮವನ್ನು ನ್ಯಾಷನಲ್ ಕಾನ್ಫೆರೆನ್ಸ್ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರ ಕಣಿವೆ ರಾಜ್ಯ ಜಮ್ಮು-ಕಾಶ್ಮೀರವನ್ನು ಈಗ ಮಾರಾಟಕ್ಕಿದೆ ಎಂದು ವ್ಯಂಗ್ಯ ಮಾಡಿದೆ.
ಜಮ್ಮು-ಕಾಶ್ಮೀರದ ಭೂ ಮಾಲೀಕತ್ವ ಕಾನೂನುಗಳಿಗೆ ತಿದ್ದುಪಡಿ ತಂದಿರುವುದು ಸಹಿಸಲು ಆಗುತ್ತಿಲ್ಲ. ಕೃಷಿಯೇತರ ಭೂಮಿ ಖರೀದಿ ಮತ್ತು ಕೃಷಿ ಜಮೀನಿನ ಹಸ್ತಾಂತರ ಈಗ ಇನ್ನಷ್ಟು ಸುಲಭ ಮಾಡಿಕೊಡಲಾಗಿದೆ. ಈ ರಾಜ್ಯದ ಸ್ವಾತಂತ್ರ್ಯಕ್ಕಿದ್ದ ಒಂದು ಸಣ್ಣ ಎಳೆ ಕೂಡ ಹೊರಟು ಹೋಯಿತು. ಜಮ್ಮು-ಕಾಶ್ಮೀರ ಈಗ ಮಾರಾಟಕ್ಕಿದೆ. ಬಡ ಹಾಗೂ ಸಣ್ಣ ಭೂಮಾಲೀಕರು ಈಗ ತೊಂದರೆ ಅನುಭವಿಸುತ್ತಾರೆ ಎಂದು ಫಾರೂಕ್ ಅಬ್ದುಲ್ಲಾ ಆಕ್ರೋಶ ಹೊರ ಹಾಕಿದ್ದಾರೆ.








