ನವದೆಹಲಿ, ಮೇ 22 : ಭಾರತದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಇಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು ಎನ್ನುವ ಪ್ರಸ್ತಾವನೆಗೆ ವಿಶ್ವ ಆರೋಗ್ಯ ಸಭೆಯಲ್ಲಿ ಮೇ 19ರಂದು ಸಹಿ ಮಾಡಲಾಗಿತ್ತು. ಇನ್ನು 3 ವರ್ಷಗಳ ಅವಧಿಗೆ ಡಾ. ಹರ್ಷವರ್ಧನ್ ಈ ಹುದ್ದೆಯಲ್ಲಿ ಇರಲಿದ್ದಾರೆ. ಈ ಹಿಂದೆ ಡಾ. ಹಿರೋಕಿ ನಕಟಾನಿ ಇದರ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿದ್ದರು. ಇದೀಗ ಭಾರತದ ಕೇಂದ್ರ ಆರೋಗ್ಯ ಡಾ. ಹರ್ಷವರ್ಧನ್ ಆ ಸ್ಥಾನಕ್ಕೇರಿದ್ದಾರೆ.
ಡಬ್ಲುಹೆಚ್ಓ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿರುವ ಡಾ. ಹರ್ಷವರ್ಧನ್, ಇಡೀ ಜಗತ್ತಿನಲ್ಲಿ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಹರಡಿದೆ. ಇಂತಹ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿರುವುದು ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ಎರಡು ದಶಕಗಳವರೆಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸವಾಲುಗಳು ಎದುರಾಗಲಿವೆ ಅನ್ನೋದು ನಮಗೆಲ್ಲಾ ಗೊತ್ತಿದೆ. ಈ ಸವಾಲುಗಳನ್ನ ನಾವು ಒಟ್ಟಾಗಿ ಎದುರಿಸಬೇಕು ಎಂದರು.
ಇನ್ನ ಸಚಿವ ಹರ್ಷವರ್ಧನ್, 34 ಸದಸ್ಯರ ಡಬ್ಲುಹೆಚ್ಓ ಎಕ್ಸಿಕ್ಯೂಟಿವ್ ಬೋರ್ಡ್ ಅಧ್ಯಕ್ಷರಾಗಲು ಭಾರತದಿಂದ ನಾಮನಿರ್ದೇಶಿತವಾಗಿದ್ದರು. ಜಪಾನ್ ನ ಡಾ. ಹಿರ್ಕೋಯಿ ನಕತಾನಿ ಅವರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಭಾರತದ ಪ್ರತಿನಿಧಿಯನ್ನ ನೇಮಿಸಲು 194 ದೇಶಗಳ ಪ್ರತಿನಿಧಿಗಳು ವಿಶ್ವ ಆರೋಗ್ಯ ಸಭೆಯಲ್ಲಿ ಅಂಗೀಕರಿಸಿದ್ದರು.