ಯಾರು ಹೆಚ್ಚು ಸಿರಿವಂತರು? ಅಂಬಾನಿಯೋ ಅಥವಾ ರತನ್ ಟಾಟಾ ನೀವೇ ನಿರ್ಧರಿಸಿ:
ರತನ್ ಟಾಟಾ ಮತ್ತು ಮುಖೇಶ್ ಅಂಬಾನಿ ಹೆಸರು ಕೇಳದವರು ಯಾರಿದ್ದಾರೆ ಹೇಳಿ? ಭಾರತದ ಅತ್ಯಂತ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದರೆ, ರತನ್ ಟಾಟಾ ನಂತರದ ಸ್ಥಾನದಲ್ಲಿದ್ದಾರೆ. ಭಾರತದ ಪ್ರಖ್ಯಾತ ವಿಶ್ವವಿದ್ಯಾಲಯವೊಂದು ರಿಲಯನ್ಸ್ ನಲ್ಲಿ ಹಣಹೂಡಿಕೆ ಮಾಡಿ, ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡಿ ಎಂದು ಒಮ್ಮೆ ಹೇಳಿತ್ತು. ಇದರ ವಾಚ್ಯಾರ್ಥ ಮತ್ತು ಗೂಢಾರ್ಥ ಗೊತ್ತಿದ್ದಬರಿಗಷ್ಟೇ ಗೊತ್ತು.
ರತನ್ ಟಾಟಾ ಹಾಗೂ ಮುಖೇಶ್ ಅಂಬಾನಿ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಅದರಲ್ಲಿ ಒಂದು ಅವರಿಬ್ಬರೂ ಪ್ರಪಂಚದಲ್ಲೇ ಅತ್ಯತ್ತಮವಾದ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಆದರೂ ರತನ್ ಟಾಟಾಗಿಂತ ಅಂಬಾನಿ ಏಕೆ ಹೆಚ್ಚು ಸಿರಿವಂತರು? ಈ ಪ್ರಶ್ನೆ ಸರ್ವೇಸಾಧಾರಣವಾಗಿ ಕೇಳಿಬರುತ್ತಿರುತ್ತದೆ. ರತನ್ ಟಾಟಾ ಕೂಡ ಒಂದು ಸಮಾರಂಭದಲ್ಲಿ ಈ ಪ್ರಶ್ನೆ ಎದುರಿಸಿದ್ದರು. ಅದಕ್ಕೆ ಟಾಟಾ ನಾನೊಬ್ಬ ಕೈಗಾರಿಕೋದ್ಯಮಿ ಅಂಬಾನಿ ಒಬ್ಬ ಶುದ್ಧ ಚಾಣಾಕ್ಷ ಉದ್ಯಮಿ ಎಂದು ಹೇಳಿ ಮಾತು ಮುಗಿಸಿದ್ದರು.
ಟಾಟಾ ತಮ್ಮ ಸಂಸ್ಥೆಯ ಶೇ.66ರಷ್ಟು ಲಾಭವನ್ನು ಸಮುದಾಯದ ಬೇರೆ ಬೇರೆ ಸಮಾಜಮುಖಿ ಕ್ಷೇತ್ರಗಳ ಅಭಿವೃದ್ಧಿಗೆ ದಾನ ಮಾಡುತ್ತಾರೆ. 2010ರಲ್ಲಿ ಟಾಟಾ ಸಮೂಹ ಸಂಸ್ಥೆಗಳ ಒಟ್ಟು ವಾರ್ಷಿಕ ಆದಾಯ 118 ಬಿಲಿಯನ್ ಡಾಲರ್ ಹಾಗೂ ರಿಲಯನ್ಸ್ ಸಂಸ್ಥೆಯ 2010ರ ಆದಾಯ 44 ಬಿಲಿಯನ್ ಡಾಲರ್ ಆಗಿತ್ತು. ಅಲ್ಲಿಗೆ ರಿಲಾಯನ್ಸ್ ನ ಎರಡು ಪಟ್ಟು ಹೆಚ್ಚು ಟಾಟಾ ಅವರದ್ದಿತ್ತು.
ಭಾರತದಲ್ಲಿ ಟಾಟಾ ಹೊರತು ಪಡಿಸಿ ಇನ್ನಾರೂ ಇಷ್ಟೊಂದು ದೊಡ್ಡ ಮಟ್ಟದ ಲಾಭವನ್ನು ದಾನ ಮಾಡುವ ಶಕ್ತಿ ಹೊಂದಿಲ್ಲ. ನಮ್ರತೆ ಎಂಬುದು ರತನ್ ಟಾಟಾ ಅವರ ರಕ್ತದಲ್ಲಿಯೇ ಇದೆ. ನಮ್ರತೆಯ ವಿಚಾರದಲ್ಲಿ ಟಾಟಾ ಅವರ ಜೊತೆ ಯಾರೂ ಸ್ಪರ್ಧಿಸಲಾರರು. ಇತ್ತೀಚೆಗಷ್ಟೇ ರತನ್ ಟಾಟಾ ಹಾರ್ವರ್ಡ್ ಯೂನಿವರ್ಸಿಟಿಗೆ 50 ಮಿಲಿಯನ್ ಡಾಲರ್ ದಾನ ಮಾಡಿದ್ದಾರೆ. ಕಳೆದ ದೀಪಾವಳಿಯಲ್ಲಿ 1000 ಕೋಟಿ ಹಣವನ್ನು ಕ್ಯಾನ್ಸರ್ ಪೇಷೆಂಟ್ ಗಳಿಗೆ ದಾನ ನೀಡಿದ್ದಾರೆ.
ಟಾಟಾ ಸನ್ಸ್ ಸಂಸ್ಥೆ 2 ಲೋಕೋಪಕಾರಿ ಟ್ರಸ್ಟ್ ಗಳನ್ನೂ ಕೂಡ ನಡೆಸುತ್ತಿದೆ. ಅವು ಸರ್ ದೊರಾಬ್ಜಿ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್. ಟಾಟಾ ಸನ್ಸ್ ಸಂಸ್ಥೆಯ ಶೇ.27ರಷ್ಟು ಶೇರ್‍ಗಳನ್ನು ದೊರಾಬ್ಜಿ ಟ್ರಸ್ಟ್ ಹಾಗೂ ಶೇ.23.5 ರಷ್ಟು ಶೇರ್ ಗಳನ್ನು ರತನ್ ಟಾಟಾ ಟ್ರಸ್ಟ್ ಹೊಂದಿದೆ. ರತನ್ ಟಾಟಾ, ತಮಗೋಸ್ಕರ ಟಾಟಾ ಸಂಸ್ಥೆಯ ಶೇ. 83ರಷ್ಟು ಶೇರ್ ಹೊಂದಿದ್ದಾರೆ. ಅವರ ಒಟ್ಟು ಆಸ್ತಿ ಸುಮಾರು 9258 ಕೋಟಿ.
ಇನ್ನು ಮುಖೇಶ್ ಅಂಬಾನಿ ತಮ್ಮ ಆದಾಯದ ಶೇ.0.2 ನಷ್ಟು ಮಾತ್ರ ದಾನ ಮಾಡುತ್ತಾರೆ. ಈಗ ತಿಳಿಯಿತಲ್ಲವೇ? ಟಾಟಾಗಿಂತ ಅಂಬಾನಿ ಏಕೆ ಹೆಚ್ಚು ಶ್ರೀಮಂತರೆಂದು. ತಮ್ಮ ಉದ್ಧಾರ ಮಾತ್ರವಲ್ಲ ಸಮಾಜದ ಉದ್ಧಾರಕ್ಕೂ ಟಾಟಾ ಸಂಸ್ಥೆಯಾಗಲಿ, ಟಾಟಾ ಅವರಾಗಲಿ ಕೈಜೋಡಿಸುತ್ತಾರೆ. ಹೀಗಾಗಿ ದಾನ ಧರ್ಮ ಎಂಬುದು ಸಾಧಾರಣವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಯೋಚಿಸಿ ನೋಡಿ. ನಿಮಗೆ ಈಗಲೂ ಅಂಬಾನಿಯೇ ಹೆಚ್ಚಿನ ಶ್ರೀಮಂತರು ಎನಿಸುತ್ತಾರೆಯೇ? ಹಾಗೆನಿಸಿದರೆ ಅದು ದುರದೃಷ್ಟವೇ ಸರಿ.
ರತನ್ ಟಾಟಾ ಬಗ್ಗೆ ಬರೆದ ಈ ಸಂದರ್ಭದಲ್ಲಿಯೇ ಅವರ ಹಾಗೂ ಅವರ ತಂದೆಯ ನಡುವಿನ ಘಟನೆಯೊಂದು ನೆನಪಿಗೆ ಬರುತ್ತಿದೆ. ರತನ್ ಟಾಟಾ ಅವರ ತಂದೆ ನಾವಲ್ ಟಾಟಾ, ರತನ್ ಟಾಟಾ ಅವರು ಬಳಸುತ್ತಿದ್ದ ಸೋಪುಗಳ ಉಳಿಕೆ ತುಂಡುಗಳನ್ನು ಸೇರಿಸಿ ತಮ್ಮ ಸ್ನಾನಕ್ಕೆ ಬಳಸುತ್ತಿದ್ದರಂತೆ. ಅದನ್ನು ನೋಡಿದ ರತನ್ ಟಾಟಾ ತಂದೆಯ ಬಳಿ ಹಾಗೇಕೆ ಉಳಿದ ತುಂಡುಗಳನ್ನು ಬಳಸುತ್ತಿದ್ದೀರಿ ಎಂದು ಕೇಳಿದರಂತೆ ಅದಕ್ಕೆ ನಾವಲ್ ಟಾಟಾ, “ನಿಮ್ಮಪ್ಪ ಶ್ರೀಮಂತ, ನಮ್ಮಪ್ಪ ಅಲ್ಲ” ಎಂದರಂತೆ. ಬಹುಶಃ ಅದೊಂದು ಮಾತೇ ಇರಬೇಕು ರತನ್ ಟಾಟಾ ತಾವು ಯೋಚಿಸುವ ವಿಧಾನವನ್ನೇ ಬದಲಾಯಿಸಿಕೊಂಡರು. ಸಮಾಜಸೇವೆಗೆ ತಮ್ಮ ಸಂಪತ್ತಿನ ಬಹುಪಾಲು ಮೀಸಲಿರಿಸಿದರು.
ಹೀಗಾಗಿಯೇ ರತನ್ ಟಾಟಾ ಅಂಬಾನಿಗಿಂತ ಶ್ರೀಮಂತರಾಗಬಹುದಾದ ಎಲ್ಲಾ ಅವಕಾಶಗಳಿದ್ದರೂ ಸಂಪತ್ತಿನ ಶ್ರೀಮಂತಿಕೆ ಬಿಟ್ಟು ಮಾನವೀಯತೆಯ ಶ್ರೀಮಂತಿಕೆ ಮೆರೆಯುತ್ತಿದ್ದಾರೆ.
ಸಂಗ್ರಹ ಮಾಹಿತಿ:-
ಅಂಬಿಕಾ ಸೀತೂರು








