ಬೆಂಗಳೂರು: ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಭೇಟಿಗೂ, ಡಿಕೆಶಿ ಬಳಿ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆನ್ನಲಾದ ಮಾತುಗಳಿಗೂ ಎಲ್ಲೋ ಹೊಂದಾಣಿಕೆ ಆಗುತ್ತಿದೆಯಾ ಎಂಬ ಚರ್ಚೆ ರಾಜ್ಯದಲ್ಲಿ ನಡೆಯುತ್ತಿದೆ.
ಬಿ.ಎಸ್ ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಗಟ್ಟಿಯಾಗಿ ನಿಲ್ಲಬಲ್ಲಂತಹ, ಪಕ್ಷವನ್ನು ಹಾಗೂ ಒಂದು ಸಮುದಾಯವನ್ನು ಪ್ರಬಲವಾಗಿ ಪ್ರತಿಬಿಂಬಿಸುವ ನಾಯಕರು ರಾಜ್ಯ ಬಿಜೆಪಿಯಲ್ಲಿ ಇದ್ದಾರಾ ಎಂಬ ಪ್ರಶ್ನೆಗೆ ಇಲ್ಲವೇ ಇಲ್ಲ ಎನ್ನಬಹುದು.
2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಬಿಜೆಪಿ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿ ಕೆಜೆಪಿ ಕಟ್ಟಿದ್ದರು. ಇದರ ಪರಿಣಾಮ ಬಿಜೆಪಿ ಹೀನಾಯ ಸೋಲು ಕಂಡು ಕೇವಲ 40 ಸ್ಥಾನ ಗೆದ್ದು ತೃಪ್ತಿ ಪಟ್ಟುಕೊಂಡಿತು. ಆದರೆ, ಇದಾದ ವರ್ಷದೊಳಗೆ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬರುವ ಮೂಲಕ ಪಕ್ಷಕ್ಕೆ ಬಲ ತುಂಬಿದರು. ಅದು 2018ರ ಚುನಾವಣೆಯಲ್ಲು ಪ್ರತಿಬಿಂಬಿಸಿತು. ಸರ್ಕಾರ ರಚನೆಗೆ ಸ್ಪಷ್ಟ ಬಹುಮತ ಸಿಗದೇ ಇದ್ದರೂ, ಕಳೆದ ವರ್ಷ ಆಪರೇಶನ್ ಕಮಲ ಮಾಡಿ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ ಮತ್ತೆ ಅಧಿಕಾರ ಹಿಡಿದಿದ್ದು ಯಡಿಯೂರಪ್ಪ ಅವರ ತಾಕತ್ತಿಗೆ ನಿದರ್ಶನವಾಗಿದೆ.
ಹೀಗಾಗಿ ಯಡಿಯೂರಪ್ಪ ಅವರಷ್ಟು ತಾಕತ್ತು ಪ್ರದರ್ಶನ ಮಾಡಬಲ್ಲ ಇನ್ನೊಬ್ಬ ನಾಯಕರು ಬಿಜೆಪಿಯಲ್ಲಿ ಇದ್ದಾರಾ..? ಈ ಚರ್ಚೆ ಕೂಡ ಬಿಜೆಪಿಯಲ್ಲಿ ಮುನ್ನಲೆಗೆ ಬಂದಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿದರೆ ಬಿಜೆಪಿ ಯಾವ ನಾಯಕ ಯಡಿಯೂರಪ್ಪ ಅವರನ್ನು ಸರಿಗಟ್ಟುತ್ತಾರೆ, ಹೈಕಮಾಂಡ್ ತಲೆಯಲ್ಲಿರುವ ನಾಯಕ ಯಾರು..? ಅದು ಡಿಸಿಎಂ ಲಕ್ಷ್ಮಣ್ ಸವದಿಯೋ..? ಪ್ರಹ್ಲಾದ್ ಜೋಷಿಯೋ..ಅಥವಾ ಆರ್.ಅಶೋಕ ಅವರೋ..?
ಇದೇ ವೇಳೆ, ಯಡಿಯೂರಪ್ಪ ಕೂಡ ಹೈಕಮಾಂಡ್ ಹೇಳಿದ ಕೂಡಲೇ ಸುಮ್ಮನೆ ಅಧಿಕಾರ ಬಿಟ್ಟು ಬಿಡುತ್ತಾರಾ..! ಯಾವುದೇ ಷರತ್ತು ವಿಧಿಸದೆ ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗೆ ಇಳಿಯುತ್ತಾರಾ..? 2011-12ರಲ್ಲಿ ಆದ ಹೈಡ್ರಾಮಾ ಮತ್ತೆ ಮರುಕಳಿಸುವುದಿಲ್ಲವಾ.. ಎಂಬ ಚರ್ಚೆಗಳು ರಾಜ್ಯದಲ್ಲಿ ಕೇಳಿ ಬರುತ್ತಿವೆ.
ಈ ಎಲ್ಲಾ ಚರ್ಚೆಗಳ ನಂತರವೂ ಸತ್ಯ ಯಾವುದು, ಸುಳ್ಳು ಯಾವುದು ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.