ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಸಂತೋಷ್ ಪರ್ವ ಶುರುವಾಗಿದೆ. ರಾಜ್ಯಸಭೆ ಚುನಾವಣೆ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರನ್ನು ಅಭ್ಯರ್ಥಿಗಳನ್ನು ಮಾಡುವದರಲ್ಲಿ ಬಿ.ಎಲ್ ಸಂತೋಷ ಪಾತ್ರವಿದೆ ಎಂಬುದು ಬಹಿರಂಗವಾದ ಸತ್ಯ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ರಮೇಶ್ ಕತ್ತಿ, ಪ್ರಭಾಕರ್ ಕೋರೆ, ಪ್ರಕಾಶ್ ಶೆಟ್ಟಿ ಹೆಸರುಗಳು ಚರ್ಚೆ ಆಗಿದ್ದವು. ಆದರೆ ಈ ಮೂರು ಜನಕ್ಕೂ ಟಿಕೆಟ್ ಸಿಗುವುದಿಲ್ಲ ಎಂಬುದು ಬಿ.ಎಲ್ ಸಂತೋಷ್ ಗೆ ಮೊದಲೇ ತಿಳಿದಿತ್ತು. ಇದನ್ನು ಸಭೆಯಲ್ಲಿ ಆಗಲಿ ಅಥಾವ ಸಿಎಂ ಯಡಿಯೂರಪ್ಪ ಅವರ ಬಳಿ ಆಗಲಿ ಸಂತೋಷ್ ಹೇಳಿರಲಿಲ್ಲ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನಗಳಿಂದಲೂ ನಾಯಕತ್ವದ ಪ್ರಶ್ನೆ ಎದುರಾಗಿದೆ. ಬಿ.ಎಸ್. ಯಡಿಯೂರಪ್ಪನವರು ಅಧಿಕಾರವನ್ನು ಬಿಟ್ಟು ಕೊಡಬೇಕು ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದವು. ಆದರೆ ಬಿಎಸ್ ಯಡಿಯೂರಪ್ಪ ಬಿಜೆಪಿಯಲ್ಲಿ ತಮ್ಮ ಹಿಡಿತ ಹೊಂದಿರುವ ಕಾರಣಕ್ಕೆ ನಾಯಕತ್ವದ ಪ್ರಶ್ನೆ ಅಲ್ಲಿಗೆ ನಿಂತಿತ್ತು.

ರಾಜ್ಯಸಭೆ ಚುನಾವಣೆಗೆ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಆಗಲು ಪ್ರಮುಖ ಕಾರಣ ಬಿ.ಎಲ್ ಸಂತೋಷ್ ಎಂಬುದು ಜಗತ್ತಿಗೆ ತಿಳಿದಿರುವ ಸತ್ಯವಾಗಿದೆ. ಹಾಗಾಗಿ ಈಗ ಮತ್ತೆ ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಬಿಜೆಪಿ ಅಖಾಡಕ್ಕೆ ಬಿ.ಎಲ್ ಸಂತೋಷ್ ಯಾವಗ ಎಂಟ್ರಿ ಕೊಟ್ಟರೋ ಅಲ್ಲಿಂದ ಇಲ್ಲಿಯವರೆಗೂ ಪಕ್ಷದಲ್ಲಿ ತಮ್ಮ ಹಿಡಿತ ಸಾಧಿಸುತ್ತಾ ಬಂದಿದ್ದಾರೆ. ಹಾಗಾಗಿ ಬಿಜೆಪಿ ಈಗ ಒಡೆದ ಮನೆಯಾಗಿದೆ. ಒಂದು ಕಡೆ ಬಿಎಸ್ ವೈ ಬಣ ಮತ್ತೊಂದೆಡೆ ಬಿ.ಎಲ್ ಸಂತೋಷ್ ಬಣ. ಈ ಎರಡು ಬಣಗಳ ನಡುವೆ ಶೀತಲ ಸಮರ ನಡೆದಿದೆ. ಬಿಜೆಪಿಯಲ್ಲಿ ಬಿ.ಎಲ್ ಸಂತೋಷ್ ಅವರ ಬಣ ಮೆಲುಗೈ ಸಾಧಿಸಿದೆ ಎಂಬುದು ಯಡಿಯೂರಪ್ಪ ಬಣದ ಶಾಸಕರೇ ಒಪ್ಪಿದ್ದಾರೆ. ಮೈತ್ರಿ ಸರ್ಕಾರದ ರಚನೆ ಸಮಯದಲ್ಲಿ ಬಿ.ಎಸ್. ಯಡಿಯೂರಪ್ಪ ಒಂದು ವರ್ಷ ಸಿಎಂ ಆಗಿರಬೇಕು. ಒಂದು ವರ್ಷದ ನಂತರ ಬೇರೆಯವರಿಗೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಮಾತುಕತೆ ಸಂತೋಷ್ ಮತ್ತು ಬಿ.ಎಸ್.ಯಡಿಯೂರಪ್ಪನವರ ನಡುವೆ ನಡೆದಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಾರಂಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿ.ಎಲ್ ಸಂತೋಷ್ ಬ್ರೇಕ್ ಹಾಕಿದ್ದರು. ಇದಾದ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಿದರು. ಇದಲ್ಲದೆ ರಾಜ್ಯಸಭೆ ಚುನಾವಣೆಯಲ್ಲಿ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರನ್ನು ಅಭ್ಯರ್ಥಿಗಳನ್ನಾಗಿ ಮಾಡಿ ತಮ್ಮ ಪವರ್ ಅನ್ನು ಸಂತೋಷ್ ತೋರಿಸಿದ್ದಾರೆ. ರಾಜ್ಯ ಬಿಜೆಪಿ ಪಾಲಿಗೆ ಬಿ.ಎಲ್ ಸಂತೋಷ್ ಹೈಕಮಾಂಡ್ ಆಗಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಸಂತೋಷ್ ನಿರ್ಣಯವೇ ಅಂತಿಮ ಎಂಬಂತಾಗಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ಹೈಕಮಾಂಡ್ ಸಂತೋಷ್ ಮಾತು ಕೇಳುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
ಮುಂದಿನ ಸಿಎಂ ಯಾರು ?
ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಬಳಿಕ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿವೆ. ಒಂದು ವೇಳೆ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನ ಬಿಟ್ಟುಕೊಟ್ಟರೇ ಮುಂದಿನ ಸಿಎಂ ಯಾರು ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಸಂತೋಷ್ ಮತ್ತು ಬಿ,ಎಸ್. ಯಡಿಯೂರಪ್ಪ ನಡುವೆ ಮಾತುಕತೆ ನಡೆದಿದೆ. ಬಿಎಸ್ವೈ ಒಂದು ವರ್ಷ ಮಾತ್ರ ಸಿಎಂ ಆಗಿರಬೇಕು. ಒಂದು ವರ್ಷದ ನಂತರ ಹೊಸ ಪಿಳಿಗೆಗೆ ಅಧಿಕಾರ ಬಿಟ್ಟು ಕೊಡಬೇಕು ಎಂಬ ಮಾತುಕತೆ ನಡೆದಿತ್ತು. ಈ ಬಗ್ಗೆ ಸಂತೋಷ ಬಣದಲ್ಲಿ ಗುಸು ಗುಸು ಶುರುವಾಗಿದೆ.
ಒಂದು ವೇಳೆ ಮಾತುಕತೆಯ ಪ್ರಕಾರ ಬಿ,ಎಸ್, ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದರೆ ಮುಂದಿನ ಸಿಎಂ ಯಾರು ಎಂಬುದು ಕುತೂಹಲ ಕೆರಳಿಸಿದೆ. ಸಿಎಂ ಸ್ಥಾನ ಆಯ್ಕೆ ವಿಚಾರದಲ್ಲಿ ಸಂತೋಷ್ ಅವರ ಮೇಲುಗೈ ಸಾಧಿಸಿದರೆ, ಯಾರನ್ನ ಆಯ್ಕೆ ಮಾಡುತ್ತಾರೆ ಎಂಬುದು ಚರ್ಚಿತ ವಿಷಯವಾಗಿದೆ.
ಬಿ.ಎಲ್ ಸಂತೋಷ್ ಬಣದಿಂದ ಸಿಎಂ ಅಭ್ಯರ್ಥಿ ಯಾರು ?
ಬಿ.ಎಲ್ ಸಂತೋಷ್ ಮೊದಲಿಂದಲೂ ಬಿಜೆಪಿಯಲ್ಲಿ ಯಾರು ಆರ್.ಎಸ್.ಎಸ್ ಹಿನ್ನೆಲೆಯಲ್ಲಿ ಹೊಂದಿದ್ದಾರೋ ಅವರಿಗೆ ಒತ್ತು ನೀಡಿದ್ದಾರೆ. ಇದಕ್ಕೆ ಪುರಾವೆ ಎಂದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆರ್.ಎಸ್.ಎಸ್ ಹಿನ್ನೆಲೆ ಹೊಂದಿದ್ದ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅಲ್ಲದೆ ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಸಂಘಪರಿವಾರ ಹಿನ್ನೆಲೆ ಹೊಂದಿದವರಿಗೆ ಟಿಕೆಟ್ ನೀಡಲಾಗಿದೆ.
ಪ್ರಸ್ತುತ ಬಿಜೆಪಿ ಸಚಿವ ಸಂಪುಟದಲ್ಲಿ ಸಚಿವ ಸಿ.ಟಿ ರವಿ, ಕೆ.ಎಸ್ ಈಶ್ವರಪ್ಪ ಹಾಗೂ ಸಚಿವ ಸುರೇಶ್ ಕುಮಾರ್ ಆರ್.ಎಸ್.ಎಸ್ ಹಿನ್ನೆಲೆ ಹೊಂದಿದ್ದವರಾಗಿದ್ದಾರೆ. ಜೊತೆಗೆ ಬಿಜೆಪಿ ಹೊಸ ಪಿಳಿಗೆಗೆ ಒತ್ತು ನೀಡಬೇಕು ಎಂಬ ಚರ್ಚೆ ನಡೆದಿದೆ . ಈ ಹಿನ್ನೆಲೆಯಲ್ಲಿ ಸಚಿವ ಸಿ.ಟಿ ರವಿ ಸಿಎಂ ಸ್ಥಾನಕ್ಕೇರುವ ಸಾಧ್ಯತೆಗಳಿವೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಚಿವ ಸಿ,ಟಿ ರವಿ ಬಿ.ಎಲ್ ಸಂತೋಷ ನಮ್ಮ ರಾಷ್ಟ್ರೀಯ ನಾಯಕರು ಎಂದು ಹೇಳಿದ್ದಾರೆ. ಅಲ್ಲದೆ ಖಾಸಗಿ ವಾಹಿನಿವೊಂದರ ಸಂದರ್ಶನದಲ್ಲಿ ಜನನಾಯಕನಾಗಿರುವವರು ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಹೇಳಿದ್ದಾರೆ. ಬಿ.ಎಲ್ ಸಂತೋಷ ಅವರ ಜೊತೆ ಸಿ,ಟಿ ರವಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಇನ್ನೊಂದೆಡೆ ಸಚಿವ ಜಗದೀಶ್ ಶೆಟ್ಟರ್ ಸಿಎಂ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ನಾಯಕತ್ವದ ಪ್ರಶ್ನೆ ಮುನ್ನೆಲೆ ಬಂದಾಗ ಜಗದೀಶ್ ಶೆಟ್ಟರ್ ತೆರೆಮರೆಯಲ್ಲಿ ತಮ್ಮ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕದ ಭಾಗದ ಲಿಂಗಾಯತ ಶಾಸಕರು ಒಂದೆಡೆ ಸೇರಿ ಸಭೆ ನಡೆಸಿದ್ದಾರೆ. ಉಮೇಶ್ ಕತ್ತಿ ಅವರ ಮನೆಯಲ್ಲಿ ಸಭೆ ಸೇರಿ ಯಡಿಯೂರಪ್ಪ ಒಬ್ಬರೇ ಲಿಂಗಾಯತ ಸಮುದಾಯದ ನಾಯಕರಲ್ಲ. ತುಂಬ ಜನ ಲಿಂಗಾಯತ ಸಮುದಾಯದ ಶಾಸಕರು ಇದ್ದಾರೆ. ಹಾಗಾಗಿ ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಸಿದರೆ ಆ ಸ್ಥಾನವನ್ನು ಲಿಂಗಾಯತ ಸಮುದಾಯದ ನಾಯಕರಿಗೆ ನೀಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆದಿದೆ. ಅಲ್ಲದೆ ಸಭೆ ನಡೆಯಲು ಜಗದೀಶ್ ಶೆಟ್ಟರ್ ಪಾತ್ರವಹಿಸಿದ್ದರು ಎನ್ನಲಾಗಿದೆ.
ಬಿ.ಎಸ್. ಯಡಿಯೂರಪ್ಪ ಬಣದಿಂದ ಯಾರು ಸಿಎಂ ಅಭ್ಯರ್ಥಿ ?
ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನ ಬಿಟ್ಟುಕೊಟ್ಟರೇ ಮುಂದಿನ ಸಿಎಂ ಅಭ್ಯರ್ಥಿಯನ್ನ ತಮ್ಮ ಬಣದವರನ್ನೆ ಮಾಡುತ್ತಾರೆ ಎಂಬುದು ಚರ್ಚಿತ ವಿಷಯ. ಯಾಕೆಂದರೆ ಹಿಂದೊಮ್ಮೆ ಸಿಎಂ ಸ್ಥಾನವನ್ನು ಬಿಡುವ ಸನ್ನಿವೇಶ ಬಂದಾಗ ತಮ್ಮ ಬಣದಲ್ಲಿ ಗುರುತಿಸಿಕೊಂಡಿದ್ದ ಸದಾನಂದ ಗೌಡ ಅವರನ್ನು ಸಿಎಂ ಮಾಡಿದ್ದರು. ಈಗ ಮತ್ತೆ ಅದೆ ರೀತಿ ಮಾಡಬಹುದು ಎಂಬುದು ರಾಜಕೀಯ ಲೆಕ್ಕಚಾರವಾಗಿದೆ. ಹಾಗಿದ್ದರೇ ಬಿ ಎಸ್. ವೈ ಬಣದಲ್ಲಿ ಯಾರು ಸಿಎಂ ಅಭ್ಯರ್ಥಿ ಎಂದು ನೋಡಿದಾಗ, ಸದ್ಯ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರ ನಂಬಿಕೆಗೆ ಪಾತ್ರವಾಗಿತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಅಲ್ಲದೆ ಅಧಿಕಾರದಲ್ಲಿ ಅನುಭವ ಹೊಂದಿದ್ದಾರೆ. ಜೊತೆಗೆ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನೂ ಬಿ.ಎಸ್. ಯಡಿಯೂರಪ್ಪ ಅವರ ನೆರಳಿನಂತೆ ಕೆಲಸ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಲಿದೆ. ಬಿಎಸ್ ವೈ ಸುಮ್ಮನೆ ಅಧಿಕಾರ ಬಿಟ್ಟು ಕೊಡುತ್ತಾರಾ ಅಥಾವ ಮತ್ತೊಂದು ರಣ ತಂತ್ರ ಮಾಡುತ್ತಾರ ಎಂಬುದು ಕಾದು ನೋಡಬೇಕಿದೆ. ಬಿ.ಎಲ್ ಸಂತೋಷ್ ಹಿಂದೂತ್ವವನ್ನು ಪ್ರತಿಪಾಧಿಸುವವರು ಸಿಎಂ ಆಗಬೇಕು ಎಂದು ಪಟ್ಟು ಹಿಡಿತಾರಾ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.








