ನಿತೇಶ್ ರಾಣಾ… ಮುಂಬೈ ರಣಜಿ ಆಟಗಾರ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ಆಡುತ್ತಿರುವ 26ರ ಯುವ ಬ್ಯಾಟ್ಸ್ ಮೆನ್. ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಗಮನ ಸೆಳೆದಿರುವ ನಿತೇಶ್ ರಾಣಾ ತನ್ನ ಕ್ರಿಕೆಟ್ ಬದುಕಿನ ಅವಿಸ್ಮರಣೀಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
2015ರಲ್ಲಿ ನಿತೇಶ್ ರಾಣಾ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ್ರು. ಇಲ್ಲಿಯವರೆಗೆ 46 ಪಂದ್ಯಗಳನ್ನು ಆಡಿರುವ ರಾಣಾ ಅವರು, 28.55ರ ಸರಾಸರಿಯಲ್ಲಿ 1085 ರನ್ ದಾಖಲಿಸಿದ್ದಾರೆ. 2016 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 2018ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದ್ರು.
ಆದ್ರೆ ಮೊದಲ ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೇಗೆ ಆಯ್ಕೆಯಾದೆ? ನನ್ನ ಆಟವನ್ನು ನೋಡುತ್ತಿದ್ದ ಸಚಿನ್ ತೆಂಡುಲ್ಕರ್ ಏನು ಹೇಳಿದ್ದರು ? ನನ್ನ ಬಗ್ಗೆ ಸಚಿನ್ ಸಾರ್ ಮತ್ತು ಮುಂಬೈ ರಣಜಿ ತಂಡದ ಮ್ಯಾನೇಜರ್ ಜೊತೆ ಏನು ಹೇಳಿದ್ದರು ಎಂಬುದನ್ನು ಸ್ಮರಿಸಿಕೊಂಡಿದ್ದಾರೆ.
ಅದು 2015ರ ರಣಜಿ ಋತು. ಆ ಋತುವಿನಲ್ಲಿ ನಾನು ಉತ್ತಮ ಫಾರ್ಮ್ ನಲ್ಲಿದ್ದೆ. ಐಪಿಎಲ್ ಹರಾಜಿಗೆ ಒಳಪಡುತ್ತೇನೆ ಅನ್ನೋ ಭರವಸೆ ಇತ್ತು. ಐಪಿಎಲ್ ಹರಾಜು ಆಗುತ್ತಿದ್ದಾಗ ನಾನು ಬ್ಯಾಟಿಂಗ್ ಮಾಡುತ್ತಿದ್ದೆ. ಕೂಲ್ ಡ್ರಿಂಕ್ಸ್ ಟೈಮ್ ನಲ್ಲಿ ನನಗೆ ಗೊತ್ತಾಗಿದ್ದು, ನಾನು ಮುಂಬೈ ಇಂಡಿಯನ್ಸ್‍ಗೆ ಆಯ್ಕೆಯಾಗಿದ್ದೇನೆ.ಆಗ ನಾನು ನಂಬಿರಲಿಲ್ಲ. ನನ್ನ ಗೆಳೆಯ ತಮಾಷೆ ಮಾಡುತ್ತಿದ್ದಾನೆ ಅಂತ ಅಂದುಕೊಂಡೆ. ಆನಂತರ ಆತ ತಮಾಷೆ ಮಾಡುತ್ತಿಲ್ಲ ಅಂತ ಗೊತ್ತಾಯ್ತು ಅಂತ ನಿತೇಶ್ ರಾಣಾ ಹೇಳಿಕೊಂಡಿದ್ದಾರೆ.
ಆನಂತರ ನನ್ನ ಗೆಳೆಯ ಹೇಳಿದ ಮಾತು ಕೇಳಿದಾಗ ನನ್ನ ಖುಷಿಗೆ ಇತಿಮಿತಿ ಇರಲಿಲ್ಲ. ಯಾಕಂದ್ರೆ ವಿಶ್ವ ಕ್ರಿಕೆಟ್ ನ ದಂತ ಕಥೆ ಸಚಿನ್ ತೆಂಡುಲ್ಕರ್ ಸಾರ್ ನನ್ನ ಬಗ್ಗೆ ತಂಡದ ಮ್ಯಾನೇಜರ್ ರಾಹುಲ್ ಸಾಂಘ್ವಿ ಜೊತೆ ಮಾತನಾಡುತ್ತಿದ್ದರಂತೆ. ಅದೂ ಅಲ್ಲದೆ ನಾನು ಸಚಿನ್ ಸಾರ್ ಅವರ ಗಮನ ಸೆಳೆದಿದ್ದೆ ಎಂಬ ವಿಷಯವೂ ಗೊತ್ತಾಯ್ತು. ಜೊತೆಗೆ ಸಚಿನ್ ನನ್ನ ಬಗ್ಗೆ ವಿಚಾರಿಸುತ್ತಾ, ಯಾರು ಈ ಹುಡುಗ ಅಂತ ಕೇಳಿದ್ರಂತೆ. ಗೆಳೆಯನ ಈ ಮಾತುಗಳನ್ನು ಕೇಳಿದಾಗ ನನಗೆ ರೋಮಾಂಚನವಾಯ್ತು. ಯಾಕಂದ್ರೆ ಸಚಿನ್ ಸಾರ್ ನನ್ನ ಆಟವನ್ನು ನೋಡಿ ಗಮನಿಸಿದ್ದಾರಲ್ಲ ಎಂಬ ಸಾರ್ಥಕ ಭಾವನೆ ಮೂಡಿತ್ತು,
ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತನ್ನ ಕ್ರಿಕೆಟ್ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರಿದ್ರು ಎಂಬುದನ್ನು ಸಹ ನಿತೇಶ್ ಹೇಳಿದ್ದಾರೆ. ಅದು 2016ರ ಐಪಿಎಲ್ ಪಂದ್ಯ. ಗುಜರಾತ್ ಲಯನ್ಸ್ ವಿರುದ್ಧದ ಮಹತ್ವದ ಪಂದ್ಯ. ಆಗ ನನಗೆ ಸಲಹೆ ನೀಡಿದವರು ರಿಕಿ ಪಾಂಟಿಂಗ್. ಯಾವುದೇ ಕಾರಣಕ್ಕೂ ರಕ್ಷಣಾತ್ಮಕ ಆಟಕ್ಕೆ ಮುಂದಾಗಬೇಡ. ನಿನ್ನಲ್ಲಿ ಆಕ್ರಮಣಕಾರಿ ಹೊಡೆಯುವ ತಾಕತ್ತು, ಸಾಮಥ್ರ್ಯವಿದೆ ಎಂದು ಹೇಳಿದ್ರು. ಪಾಂಟಿಂಗ್ ಅವರ ಮಾತಿನಂತೆ ನಾನು ಆಡಿದ್ದೆ. 36 ಎಸೆತಗಳಲ್ಲಿ 70 ರನ್ ಸಹ ದಾಖಲಿಸಿದ್ದೆ. ಆದ್ರೆ ಆ ಪಂದ್ಯವನ್ನು ಗೆಲ್ಲಿಸಿಕೊಡಲು ನನ್ನ ಕೈಯಲ್ಲಿ ಆಗಲಿಲ್ಲ ಎಂದ್ರು. ಆದ್ರೆ ಆ ಪಂದ್ಯದ ಆಟ ನನ್ನ ಕ್ರಿಕೆಟ್ ಬದುಕಿಗೆ ಹೊಸ ತಿರುವನ್ನು ನೀಡಿತ್ತು ಅಂತ ಹೇಳ್ತಾರೆ ನಿತೇಶ್ ರಾಣಾ








