ಬೆಂಗಳೂರು: ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವ ನಟ ನಟ ದರ್ಶನ್ (Darshan) ಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರೌಡಿಶೀಟರ್ ಗಳೊಂದಿಗೆ ಆರಾಮಾಗಿ ಕುಳಿತು, ಕೈಯಲ್ಲಿ ಕಾಫಿ, ಸಿಗರೇಟ್ ಹಿಡಿದು ದರ್ಶನ್ ರೌಡಿಶೀಟರ್ ಗಳೊಂದಿಗೆ ಹರಟೆಯಲ್ಲಿ ಕಾಲ ಕಳೆಯುತ್ತಿರುವ ಫೋಟೋ ವೈರಲ್ ಆಗಿದೆ. ಅಲ್ಲದೇ, ವಿಡಿಯೋ ಕಾಲ್ ಕೂಡ ವೈರಲ್ ಆಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆಗೆ ಪೊಲೀಸರು ತಯಾರಿ ನಡೆಸುತ್ತಿರುವ ಹೊತ್ತಿನಲ್ಲಿ ನಟ ದರ್ಶನ್ ರೌಡಿಶೀಟರ್ಗಳ ಜೊತೆ ಕುಳಿತಿರುವ ಫೋಟೋ ಈಗ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಜೈಲಲ್ಲಿ ನಟ ದರ್ಶನ್ ಐಶಾರಾಮಿ ಜೀವನ ನಡೆಸ್ತಿದ್ದಾರಾ? ರಾಜಾತಿಥ್ಯ ಪಡೆಯುತ್ತಿದ್ದಾರಾ? ಎಂಬ ಅನುಮಾನಗಳಿಗೆ ಕಾರಣವಾಗಿದೆ.
ನಟೋರಿಯಸ್ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ (Wilson Garden Naga), ಕುಳ್ಳ ಸೀನಾ (Kulla Seena) ಹಾಗೂ ತನ್ನ ಮ್ಯಾನೇಜರ್ ನಾಗರಾಜ್ (Nagaraj) ಜೊತೆ ನಟ ದರ್ಶನ್ ಕುಳಿತಿದ್ದಾರೆ. ಸದ್ಯ ಈ ಫೋಟೋ ಈಗ ವೈರಲ್ ಆಗಿದೆ. ಹೀಗಾಗಿ ಜನರು ಈ ಫೋಟೋಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿರುವ ವ್ಯವಸ್ಥೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಭೂಗತ ಲೋಕದಲ್ಲಿ ಸುದ್ದಿ ಮಾಡಿರುವ ವಿಲ್ಸನ್ ಗಾರ್ಡನ್ ನಾಗ ಸಿದ್ದಾಪುರ ಮಹೇಶನ ಮರ್ಡರ್ ಕೇಸ್ ಲ್ಲಿ ಜೈಲು ಸೇರಿದ್ದಾನೆ. ಕೋರ್ಟ್ ಮುಂದೆ ಶರಣಾಗಿ ಜೈಲು ಸೇರಿದ್ದ ಈತನ ಮೇಲೆ ಪೊಲೀಸರು ಕೋಕಾ ಕಾಯ್ದೆ ಹಾಕಿದ್ದಾರೆ.
ಕುಳ್ಳ ಸೀನ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ರೌಡಿಶೀಟರ್ ಆಗಿದ್ದಾನೆ. ಕಾರ್ಪೊರೇಟರ್ ಕೊಲೆ ಪ್ರಕರಣದಲ್ಲಿ ಸಜಾ ಕೈದಿಯಾಗಿರುವ ಈತನ ಮೇಲೆ ಕೋಣನಕುಂಟೆ ಠಾಣೆಯಲ್ಲಿ ಹಲವು ಪ್ರಕರಣಗಳು ಇವೆ. ಈಗ ದರ್ಶನ್ ಇವರೊಂದಿಗೆ ಕುಳಿತು ಸಮಯ ಕಳೆದಿದ್ದಾರೆ. ಈ ಕುರಿತು ಗೃಹ ಇಲಾಖೆ ತನಿಖೆಗೆ ಸೂಚಿಸಿದೆ.