ಮಂಗಳೂರು : ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕ ನಡುವೆ ನಡೆದ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಹುತಾತ್ಮರಾದ ಹಿನ್ನೆಲೆ ಭಾರತದಾದ್ಯಂತ ಬಾಯ್ ಕಟ್ ಚೀನಾ ಅಭಿಯಾನ ಆರಂಭವಾಗಿದೆ. ಇದರ ಭಾಗವಾಗಿ ಕೇಂದ್ರ ಸರ್ಕಾರ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಏತನ್ಮಧ್ಯೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಾಸಕ ಯು.ಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಆಪ್ ಬಂದ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಚೈನಾಗೆ ಆಪ್ ನಿಂದ ನಷ್ಟ ಇಲ್ಲ. ಭಾರತಕ್ಕೆ ಆಪ್ ಬ್ಯಾನ್ ನಿಂದ ಲಾಭ ಇಲ್ಲ. ಪಿಎಂ ಕೇರ್ಸ್ ಫಂಡ್ ಗೆ ಟಿಕ್ ಟಾಕ್ ನಿಂದ 30 ಕೋಟಿ ಬಂದಿದೆ ಎಂದು ಆರೋಪಿಸಿದ ಖಾದರ್, ಆ ಹಣವನ್ನು ಸರ್ಕಾರ ವಾಪಸ್ ಕೊಡಲಿ. ಸರ್ಕಾರಕ್ಕೆ ಅವರ ಹಣವನ್ನು ತೆಗದುಕೊಳ್ಳೋಕೆ ನಾಚಿಕೆ ಆಗೋದಿಲ್ವಾ ಎಂದು ಮರು ಪ್ರಶ್ನೆ ಹಾಕಿದರು.
ಪ್ರಚಾರಕ್ಕೋಸ್ಕರ ಸರ್ಕಾರ ಆಪ್ ಬ್ಯಾನ್ ಮಾಡಿದೆ : ಖಾದರ್
ಚೀನಾ ಆಪ್ ಕಂಪನಿಯಲ್ಲಿ ಭಾರತೀಯರು ಉದ್ಯೋಗದಲ್ಲಿದ್ದರು. ಈಗ ಅವರು ಕೆಲಸ ಕಳೆದುಕೊಂಡಿದ್ದಾರೆ. ಆಪ್ ಮೂಲಕ ಭಾರತೀಯರು ಆದಾಯ ಪಡೆಯುತ್ತಿದ್ದರು. ಪ್ರಚಾರಕ್ಕೋಸ್ಕರ ಸರ್ಕಾರ ಆಪ್ ಬ್ಯಾನ್ ಮಾಡಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ ಖಾದರ್, ಕೇಂದ್ರ ಸರ್ಕಾರದ ನಿರ್ಧಾರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿದೆ. ಚೀನಾದವರು ಭಾರತದ ನಿರ್ಧಾರ ನೋಡಿ ನಗುವ ಪರಿಸ್ಥಿತಿ ಬಂದಿದೆ ಎಂದರು.
ಇದೇ ವೇಳೆ ಪ್ರಿಯಾಂಕಾ ಗಾಂಧಿಗೆ ಸರ್ಕಾರದ ಬಂಗಲೆ ವಾಪಾಸ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು, ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಹವಾ ಇದೆ. ಇದರಿಂದ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಪ್ರಿಯಾಂಕಾ ಗಾಂಧಿಯ ತಂದೆ, ಅಜ್ಜಿಯನ್ನು ಭಯೋತ್ಪಾದಕರು ಕೊಂದಿದ್ದಾರೆ. ಹಾಗಾಗಿ ಪ್ರಿಯಾಂಕಾ ಗಾಂಧಿಗೂ ರಕ್ಷಣೆ ನೀಡಲಾಗಿದೆ. ದೆಹಲಿಯಲ್ಲಿ ತುಂಬಾ ಮಂದಿ ಸರ್ಕಾರಿ ಬಂಗಲೆಯಲ್ಲಿ ಇದ್ದಾರೆ. ಅವರ ಹೆಸರನ್ನು ಸರ್ಕಾರ ಬಹಿರಂಗ ಪಡಿಸಲಿ. ದ್ವೇಷದ ರಾಜಕಾರಣವನ್ನು ಜನರು ಸಹಿಸೋದಿಲ್ಲ ಎಂದು ಗರಂ ಆದರು.