ಎಲ್ಲರ ಬದುಕಿನಲ್ಲಿ `ಇಣುಕುವ’, ಬೇರೊಬ್ಬರ ಚಾರಿತ್ರ್ಯ ವಧೆ ಮಾಡುತ್ತಿದ್ದೀರಿ..!
ಹತ್ರಾಸ್ನ ಮನೀಷಾ ಅತ್ಯಾಚಾರ-ಕೊಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇ ?
ಕುಸುಮಾ ಅವರ ಬ್ಯಾಡ್ ಲಕ್ ಎಂದಿದ್ದ ಪ್ರಶಾಂತ್ ಸಂಬರಗಿ
ಬೆಂಗಳೂರು: ಕಳೆದ ವಾರ ಕಾಂಗ್ರೆಸ್ ಸೇರ್ಪಡೆಯಾದ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಪತ್ನಿ ಕುಸುಮಾ ಅವರನ್ನು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕಾಲೆಳೆಯಲು ಹೋಗಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಡಿ.ಕೆ ರವಿ ಸಾವಿಗೆ ಕಾರಣವಾದ ಕಾಂಗ್ರೆಸ್ ಪಕ್ಷಕ್ಕೇ ಡಿ.ಕೆ ರವಿ ಹೆಂಡತಿ ಸೇರ್ಪಡೆಯಾಗಿದ್ದಾರೆ. ಇದು `ಕಾಂಗ್ರೆಸ್ ಮುಕ್ತ ಭಾರತ’ ಎಂದು ಕುಸುಮಾ ಅವರು ಕಾಂಗ್ರೆಸ್ ಸೇರ್ಪಡೆಯಾದ ದಿನ ಎಂದು ಪ್ರಶಾಂತ್ ಸಂಬರಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಅಷ್ಟಕ್ಕೆ ಸುಮ್ಮನಾದ ಸಂಬರಗಿ, ಡಿ.ಕೆ ಶಿವಕುಮಾರ್ ಅವರು ಕುಸುಮಾ ಅವರಿಗೆ ಆಶೀರ್ವಾದ ಮಾಡುವ ಫೋಟೋ ಹಾಕಿ, ಅದಕ್ಕೆ ಕುಸುಮಾ ಅವರ ಬ್ಯಾಡ್ ಲಕ್(ದುರಾದೃಷ್ಟ) ಡಿ.ಕೆ ರವಿಯಿಂದ ಡಿ.ಕೆ ಶಿವಕುಮಾರ್ಗೆ ವರ್ಗಾವಣೆಗೊಳ್ಳುತ್ತಿದೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದರು.
ಪ್ರಶಾಂತ್ ಸಂಬರಗಿ ಪೋಸ್ಟ್ಗೆ ಫೇಸ್ಬುಕ್ ಮೂಲಕವೇ ತಿರುಗೇಟು ಕೊಟ್ಟಿರುವ ಕುಸುಮಾ ಅವರು, ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟದ ಬಗ್ಗೆ ಪ್ರಸ್ತಾಪಿಸಿದ್ದೀರಿ.

ಎಲ್ಲರ ಬದುಕಿನಲ್ಲಿ `ಇಣುಕುವ’ ನೀವು ಹಿಂದೆ, ಮುಂದೆ ತಿಳಿಯದೇ ಬೇರೊಬ್ಬರ ಚಾರಿತ್ರ್ಯ ವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಮಂಗಳಾರತಿ ಮಾಡಿದ್ದಾರೆ.
ಪ್ರಶಾಂತ್ ಸಂಬರಗಿ ಅವರೇ ವೈಯಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ. ಕೆಲ ತಿಂಗಳುಗಳಿಂದ ನೀವು ಡ್ರಗ್ಸ್ ಹಾಗೂ ಇನ್ನಿತರ ಪಿಡುಗುಗಳ ವಿರುದ್ಧ ನಡೆಸುತ್ತಿರುವ ಹೋರಾಟ ಪ್ರಶಂಸನೀಯ. ಯುವ ಸಮೂಹಕ್ಕೆ ಡ್ರಗ್ಸ್ ವಿರುದ್ಧವಾಗಿ ಜಾಗೃತಿ ಮೂಡಿಸುವ ನಿಮಗೆ ಅಭಿನಂದನೆಗಳು ಎಂದಿದ್ದಾರೆ.
ಪ್ರತಿಯೊಬ್ಬರ ಬದುಕಿನಲ್ಲಿ ಏಳು-ಬೀಳುಗಳಿರುತ್ತವೆ. ಅದೇ ರೀತಿ ನಿಮ್ಮ ಮನೆಯಲ್ಲಿ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ? ಹೆಣ್ಣು ಎಂಬ ಮಾತ್ರಕ್ಕೆ ಇಂತಹ ವಿಡಂಬನೆ ಮತ್ತು ಅಪಪ್ರಚಾರಗಳಿಗೆ ಒಳಗಾಗಬೇಕೇ ಎಂದು ಕುಸುಮಾ ಪ್ರಶಾಂತ್ ಸಂಬರಗಿ ಅವರನ್ನು ಪ್ರಶ್ನಿಸಿದ್ದಾರೆ.
ಬೇರೆಯವರ ಮನೆಯ ಹೆಣ್ಣುಮಗಳ ಲಕ್ ಯಾವುದು ಎಂದು ಹುಡುಕುವ ಶಕ್ತಿ ಇರುವ ನಿಮಗೆ ಹತ್ರಾಸ್ನ ಮನೀಷಾ ಅತ್ಯಾಚಾರ-ಕೊಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇ ?
ಇದರಿಂದ ನಿಮ್ಮ ಹೆಣ್ಣುಮಕ್ಕಳ ಕುರಿತ ನಿಮ್ಮ ಬುದ್ದಿಮಟ್ಟ ತಿಳಿಯುತ್ತದೆ. ಈ ಆಲೋಚನೆಗಳನ್ನು ಮುಂದುವರೆಸಿ, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.









