ಬೆಳಗಾವಿ: ಹೌದು, ಬೆಳಗಾವಿ ರಾಜಕಾರಣ ಎಂದರೆ ಜಾರಕಿಹೊಳಿ ಸಾಹುಕಾರ ಕುಟುಂಬ ಎಂಬಂತಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅದರಲ್ಲಿ ಜಾರಹೊಳಿ ಕುಟುಂಬದರ ಒಬ್ಬರಾದರೂ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಜಿಲ್ಲಾ ಉಸ್ತುವಾರಿ ಕೂಡ ಜಾರಕಿಹೊಳಿ ಕುಟುಂಬಕ್ಕೇ ಹೋಗುತ್ತದೆ.
ಬೆಳಗಾವಿಯ ಸಾಹುಕಾರರು ಎಂದೇ ಅಲ್ಲಿನ ಜನ ಜಾರಕಿಹೊಳಿ ಕುಟುಂಬದರನ್ನು ಕರೆಯುತ್ತಾರೆ. ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಬೆಳಗಾವಿ ರಾಜಕೀಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಈ ಕುಟುಂಬದ ಮಾತು ಕೇಳದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡಲ್ಲ ಎಂಬ ಮಾತು ಇಲ್ಲಿ ಜನಜನಿತವಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ರಮೇಶ್ ಜಾರಕಿಹೊಳಿ ಬಂಡಾಯವೆದ್ದು, ಸರ್ಕಾರ ಪತನವಾಗಿದ್ದು ಈಗ ಇತಿಹಾಸ.
ಮೈತ್ರಿ ಸರ್ಕಾರ ಪತನಗೊಂಡ ನಂತರ ಬಿ.ಎಸ್ ಯಡಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಕಳೆದ ಡಿಸೆಂಬರ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ನಿಂದ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಪರಸ್ಪರ ಎದುರಾಳಿಗಳಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದರು.
ಗೋಕಾಕ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅಣ್ಣ ರಮೇಶ್ ಜಾರಕಿಹೊಳಿ ಎದುರು ಸಹೋದರ ಲಖನ್ ಜಾರಕಿಹೊಳಿ ಸ್ಪರ್ಧೆ ನಡೆಸಿದ್ದರು. ಹಿರಿಯ ಅಣ್ಣ ಸತೀಶ್ ಜಾರಕಿಹೊಳಿಯೇ ಮುಂದೆ ನಿಂತು ಮೈತ್ರಿ ಸರ್ಕಾರ ಬೀಳಿಸಲು ಕಾರಣರಾಗಿದ್ದ ತಮ್ಮ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಲಖನ್ರನ್ನು ಕಣಕ್ಕಿಳಿಸಿ ಭಾರಿ ಕಸರತ್ತು ನಡೆಸಿದ್ದರು. ಆದರೆ ರಮೇಶ್ ಜಾರಕಿಹೊಳಿ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿ ಸತೀಶ್ ಜಾರಕಿಹೊಳಿಗೆ ಶಾಕ್ ನೀಡಿದ್ದರು.
ಉಪಚುನಾವಣೆ ಬಳಿಕ ರಮೇಶ್ ಜಾರಕಿಹೊಳಿ ಆಗಲಿ, ಸತೀಶ್ ಜಾರಕಿಹೊಳಿ ಆಗಲಿ, ಲಖನ್ ಜಾರಕಿಹೊಳಿ ಆಗಲಿ ಮುಖಾಮುಖಿಯಾಗಿರಲಿಲ್ಲ. ರಾಜಕೀಯ ಬದ್ಧವೈರಿಗಳಂತಿದ್ದ ಅಣ್ಣ-ತಮ್ಮಂದಿರ ನಡುವೆ ದೊಡ್ಡ ಗೋಡೆಯೇ ಬೆಳೆದು ನಿಂತಿತ್ತು.
ಲಖನ್ರ ಮನೆಯ ಗೃಹ ಪ್ರವೇಶದಲ್ಲಿ ರಮೇಶ್ ಜಾರಕಿಹೊಳಿ
ಸುಮಾರು 7 ತಿಂಗಳ ಚುನಾವಣಾ ಸಂಘರ್ಷದ ಬಳಿಕ ಅಣ್ಣ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಮುಖಾಮುಖಿಯಾಗಿದ್ದಾರೆ.
ಇಂದು ಲಖನ್ ಜಾರಕಿಹೊಳಿ ಗೋಕಾಕ್ನಲ್ಲಿ ಕಟ್ಟಿಸಿರುವ ನೂತನ ಮನೆಯ ಗೃಹಪ್ರವೇಶ ಕಾರ್ಯಕಮ ಆಯೋಜಿಸಲಾಗಿದೆ. ತಮ್ಮನ ಆಹ್ವಾನದ ಮೇರೆಗೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ್ ಜಾರಕಿಹೊಳಿ ಕುಟುಂಬ ಸಮೇತ ಆಗಮಿಸಿ ತಮ್ಮನ ಆತಿಥ್ಯ ಸ್ವೀಕರಿಸಿದ್ದಾರೆ. ಬಹಳ ದಿನಗಳ ಬಳಿಕ ಅಣ್ಣ-ತಮ್ಮ ಒಂದೆಡೆ ಕುಳಿತು ಉಭಯ ಕುಶಲೋಪರಿ ವಿಚಾರಿಸಿಕೊಂಡರು.
ರಾಜಕೀಯ ವೈರತ್ವ ಏನೇ ಇದ್ದರೂ ಕರುಳ ಸಂಬಂಧವನ್ನು ಯಾರೂ ದೂರ ಮಾಡಲು ಸಾಧ್ಯವಿಲ್ಲ ಎಂಬುದನ್ನು ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.