`ಕೊಹ್ಲಿ ಕ್ಯಾಪ್ಟನ್’ ಆಗಿ ಯಾಕೆ ಗ್ರೇಟ್ ಗೊತ್ತಾ..?
ಕಿಂಗ್ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾದ ಅಬ್ಬರ ಜೋರಾಗಿದೆ. ಐಸಿಸಿ ಟ್ರೋಪಿ ಗೆದ್ದಿಲ್ಲ ಎಂಬ ಕೊರಗನ್ನು ಬಿಟ್ಟರೇ ವಿರಾಟ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಮಾಡದೇ ಇರುವ ಸಾಧನೆ ಇಲ್ಲ.
ದೇಶ-ವಿದೇಶಗಳಲ್ಲಿ ಘಟಾನುಘಟಿ ತಂಡಗಳಿಗೆ ಕೊಹ್ಲಿ ಸೇನೆ ನೀರು ಕುಡಿಸುತ್ತಿದೆ. ಆರಂಭದಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ಪ್ರಶ್ನಿಸಿದ್ದ ದಿಗ್ಗಜರೇ ಇದೀಗ ಕೊಹ್ಲಿ ನಾಯಕತ್ವವನ್ನು ಹಾಡಿಹೊಗಳುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಭಟ್, ವಿರಾಟ್ ಕೊಹ್ಲಿ ನಾಯಕತ್ವ ಗುಣಗಳನ್ನು ಹೊಗಳಿರೋದು. ಹಾಗೇ ವಿರಾಟ್ ಕೊಹ್ಲಿ ನಾಯಕರಾಗಿ ಯಾಕೆ ಎಲ್ಲರಿಗಿಂತಲೂ ಭಿನ್ನ ಎಂದು ಸಲ್ಮಾನ್ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಬ್ಯಾಡ್ ಫಾರ್ಮ್ ನಲ್ಲಿ ಅಜಿಂಕ್ಯಾ ರಹಾನೆಯನ್ನು ತಂಡದಿಂದ ಕೈಬಿಡಬೇಕು ಎಂದು ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕ್ರಿಕೆಟ್ ಅಭಿಮಾನಿಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಅಜಿಂಕ್ಯಾ ರಹಾನೆ ಅವರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇಷ್ಟಾದರೂ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಪರ ನಿಂತಿದ್ದಾರೆ.
ವಿರಾಟ್ ತನ್ನ ತಂಡದ ಸದಸ್ಯರ ಮೇಲೆ ಅಪರಿಮಿತವಾದ ನಂಬಿಕೆಯನ್ನು ಹೊಂದಿದ್ದಾರೆ. ಕಷ್ಟದ ಸಮಯದಲ್ಲಿ ಅವರಿಗೆ ವಿರಾಟ್ ಆತ್ಮವಿಶ್ವಾಸ ತುಂಬುತ್ತಾರೆ.
ಈ ಲಕ್ಷಣಗಳಿಂದಲೇ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಾಗಿ ನಿಂತಿದ್ದಾರೆ ಎಂದು ಸಲ್ಮಾನ್ ಭಟ್ ಪ್ರತಿಪಾದಿಸಿದ್ದಾರೆ.
ಅಂದಹಾಗೆ ಅಜಿಂಕ್ಯ ರಹಾನೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಯುವ ತಂಡದೊಂದಿಗೆ ರಹಾನೆ ಟೀಂ ಇಂಡಿಯಾ ಸರಣಿ ಗೆಲ್ಲುವಂತೆ ಮಾಡಿದ್ದರು.
ಅಲ್ಲದೇ ಬ್ಯಾಟಿಂಗ್ ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಇದಲ್ಲದೇ ಇತ್ತೀಚೆಗೆ ಮುಕ್ತಾಯವಾಗಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಮ್ಯಾಚ್ ನಲ್ಲಿ ರಹಾನೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು.
ಬ್ಯಾಟಿಂಗ್ ನಲ್ಲಿ ಅವರು ವಿಫಲರಾದರೂ ತಂಡವನ್ನು ಮುನ್ನಡೆಸುವಲ್ಲಿ ಅವರು ಎಲ್ಲೂ ಲೋಪ ಮಾಡಲಿಲ್ಲ. ಇದೇ ಕಾರಣಕ್ಕಾಗಿ ವಿರಾಟ್ ಕೊಹ್ಲಿ, ಅಜಿಂಕ್ಯಾ ಪರ ನಿಂತಿದ್ದಾರೆ.
ಆದ್ರೆ ಆಫ್ರಿಕಾ ಪ್ರವಾಸಕ್ಕೆ ರಹಾನೆಗೆ ಟಿಕೆಟ್ ಸಿಗುತ್ತೋ ಇಲ್ಲವೋ ಇನ್ನೂ ಸ್ಪಷ್ಟತೆ ಇಲ್ಲ. ಇತ್ತ ರಹಾನೆ ಸ್ಥಾನಕ್ಕಾಗಿ ಶ್ರೇಯಸ್ ಅಯ್ಯರ್, ಹನುಮವಿಹಾರಿ ರೇಸ್ ನಲ್ಲಿದ್ದಾರೆ.









