ಮುಂಬೈ ಇಂಡಿಯನ್ಸ್ ಪಾಲಾದ ಸಚಿನ್ ಮಗ ಅರ್ಜುನ್ ತೆಂಡುಲ್ಕರ್
ಇದು ಅಚ್ಚರಿಯಲ್ಲ.. ನಿರೀಕ್ಷಿತ.. ಅರ್ಜುನ್ ತೆಂಡುಲ್ಕರ್ ಮುಂಬೈ ತಂಡದ ಪಾಲಾಗಿದ್ದಾರೆ. ಐಪಿಎಲ್ ಬಿಡ್ಡಿಂಗ್ ನಲ್ಲಿ ಅರ್ಜುನ್ ತೆಂಡುಲ್ಕರ್ ಮೂಲ ಬೆಲೆ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆ.
ಈಗಾಗಲೇ ಅರ್ಜುನ್ ತೆಂಡುಲ್ಕರ್ ಐಪಿಎಲ್ ಬಿಡ್ಡಿಂಗ್ ಲಿಸ್ಟ್ ಗೆ ಸೇರಿಸಿಕೊಂಡಾಗಲೇ ಸಾಮಾಜಿಕ ಜಾಲ ತಾಣದಲ್ಲಿ ನಾನಾ ಟೀಕೆಗಳು ಕೇಳಿಬಂದಿದ್ದವು.
ಹಾಗೇ ಅರ್ಜುನ್ ತೆಂಡುಲ್ಕರ್ ಈಗ ಮುಂಬೈ ತಂಡಕ್ಕೆ ಸೇರಿಕೊಂಡಿರುವುದು ಅಂಬಾನಿ ಕೃಪೆ ಹಾಗೂ ಸಚಿನ್ ತೆಂಡುಲ್ಕರ್ ಅವರ ಪ್ರಭಾವದಿಂದ.
ಆದ್ರೆ ಈ ಟೀಕೆ ಹೊಸದಲ್ಲ. ಇದು ಗೊತ್ತಿರುವ ವಿಚಾರವೇ. ಆದ್ರೂ ಮುಂಬೈ ಇಂಡಿಯನ್ಸ್ ಅರ್ಜುನ್ ತೆಂಡುಲ್ಕರ್ ಅವರನ್ನು ಯಾಕೆ ಖರೀದಿ ಮಾಡಿತ್ತು.. ಐಪಿಎಲ್ ನ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್ ಗೆ ಅರ್ಜುನ್ ತೆಂಡುಲ್ಕರ್ ಅನಿವಾರ್ಯವಾಗಿತ್ತಾ? ಈ ಪ್ರಶ್ನೆಗೆ ಉತ್ತರ ಕೂಡ ಖಂಡಿತ ಅಲ್ಲಾ ಅಂತ ಬರುತ್ತೆ.
ಹಾಗಿದ್ರೂ ಅರ್ಜುನ್ ತೆಂಡುಲ್ಕರ್ ಅವರನ್ನು ಕೊನೆಯದಾಗಿ ಯಾಕೆ ಖರೀದಿ ಮಾಡಿತ್ತು ? ಹಾಗೇ ನೋಡಿದ್ರೆ ಅರ್ಜುನ್ ತೆಂಡುಲ್ಕರ್ ಕಳೆದ ಎರಡು ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆಟ್ ಬೌಲರ್ ಆಗಿದ್ದರು.
ಇನ್ನೊಂದೆಡೆ ಸಚಿನ್ ತೆಂಡುಲ್ಕರ್ ಅವರು ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿದ್ದಾರೆ. ಸಚಿನ್ ತೆಂಡುಲ್ಕರ್ ಮುಂಬೈ ತಂಡದ ನಾಯಕನಾಗಿಯೂ ಆಗಿದ್ದರು. ಇಷ್ಟು ದಿನ ಮನೆಯಲ್ಲೇ ಕ್ರಿಕೆಟ್ ಪಾಠ ಹೇಳಿಕೊಡುತ್ತಿದ್ದ ಸಚಿನ್ ತೆಂಡುಲ್ಕರ್ ಇದೀಗ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರರೊಂದಿಗೆ ಅರ್ಜುನ್ ತೆಂಡುಲ್ಕರ್ ಗೆ ಕ್ರಿಕೆಟ್ ಪಾಠ ಹೇಳಿಕೊಡಲಿದ್ದಾರೆ.
ಇನ್ನೊಂದೆಡೆ ಅರ್ಜುನ್ ತೆಂಡುಲ್ಕರ್ ಸ್ಥಳೀಯ ಆಟಗಾರ. ಈಗಾಗಲೇ ಮುಂಬೈ ತಂಡದಲ್ಲೂ ಸ್ಥಾನ ಪಡೆದುಕೊಂಡಿರುವ ಅರ್ಜುನ್ ತೆಂಡುಲ್ಕರ್ ಗೆ ಐಪಿಎಲ್ ನಲ್ಲಿ ಮುಂಬೈ ತಂಡದ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗುತ್ತಾ ಇಲ್ವೋ ಗೊತ್ತಿಲ್ಲ. ಆದ್ರೆ ಅನುಭವವಂತೂ ಸಿಕ್ಕೇ ಸಿಗುತ್ತೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅರ್ಜುನ್ ತೆಂಡುಲ್ಕರ್, ನಾನು ಯಾವಾಗಲೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿ. ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿರುವುದು ತುಂಬಾನೇ ಖುಷಿಯಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ತರಬೇತುದಾರರು, ಮಾಲೀಕರು ಮತ್ತು ಸಹಾಯ ಸಿಬ್ಬಂದಿಗಳಿಗೆ ತುಂಬಾ ಧನ್ಯವಾದಗಳು. ಅವರು ನನ್ನ ಮೇಲೆ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.