ದೇಶಾದ್ಯಂತ ಹಬ್ಬಿದ ಅಗ್ನಿಪಥ್ ಜ್ವಾಲೆ – ನೇಮಕಾತಿ ವಯೋಮಿತಿ 23 ವರ್ಷಕ್ಕೆ ಹೆಚ್ಚಿಸಿದ ಕೇಂದ್ರ….
ರಕ್ಷಣಾ ಇಲಾಖೆಯ ಅಗ್ನಿಪಥ ಯೋಜನೆಯ ವಿರೋಧದ ಬೆಂಕಿ ದೇಶಾದ್ಯಂತ ವ್ಯಾಪಿಸಿದೆ. ಯುಪಿ-ಬಿಹಾರ ಮತ್ತು ಹರಿಯಾಣದಿಂದ ತೆಲಂಗಾಣದವರೆಗೆ ಪ್ರತಿಭಟನೆ, ಹಿಂಸೆ, ಗಲಭೆಗಳು ಜರುಗಿವೆ.
ಹಲವೆಡೆ ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ದೇಶಾದ್ಯಂತ ಸುಮಾರು 200 ರೈಲುಗಳ ಮೇಲೆ ಪ್ರತಿಭಟನಾಕಾರ ಕೆಂಗಣ್ಣು ಬಿದ್ದಿದೆ. ತೆಲಂಗಾಣ ಮತ್ತು ಬಿಹಾರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಇದರ ಮಧ್ಯೆಯೇ ಸೇನೆ ಮತ್ತು ವಾಯುಪಡೆಯಿಂದ ಮಹತ್ವದ ಹೇಳಿಕೆ ನೀಡಿದ್ದು, ಎರಡು ದಿನಗಳಲ್ಲಿ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಾಗಿ, ಜೂನ್ 24 ರಿಂದ ವಾಯುಪಡೆಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಬಿಹಾರದ ಬೇಗುಸರೈ, ಲಖಿಸರಾಯ್ ಜಿಲ್ಲೆಗಳಲ್ಲಿ ಉದ್ರಿಕ್ತ ಯುವಕರ ಗುಂಪು ರಸ್ತೆ ತಡೆ ನಡೆಸುತ್ತಿದ್ದಾರೆ. ಯುವಕರು ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ರೈಲುಗಳ ಸಂಚಾದಲ್ಲಿ ವ್ಯತ್ಯಯ ಉಂಟಾಗಿದೆ. ಬೇಗುಸರೈ ಜಿಲ್ಲೆಯ ಸಾಹೇಬ್ಪುರ್ಕಮಲ್ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿ ಭಾರೀ ಗಲಾಟೆ ಸೃಷ್ಟಿಸಿದ್ದಾರೆ.
ಹೊಸ ಸೇನಾ ನೇಮಕಾತಿ ಯೋಜನೆಗೆ ಉತ್ತರ ಭಾರತದ ಹಲವೆಡೆ ವಿರೋಧ ವ್ಯಕ್ತವಾಗಿದ್ದರಿಂದ ಹಿನ್ನಡೆಯನ್ನ ಅನುಭವಿಸುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಅಗ್ನಿವೀರರನ್ನ ನೇಮಿಸಿಕೊಳ್ಳಲು ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ.
ಸ್ತುತ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿರುವ ಸರ್ಕಾರವು ಗರಿಷ್ಟವಯೋಮಿತಿಯನ್ನು 21 ವರ್ಷಗಳಿಂದ 23 ವರ್ಷಕ್ಕೆ ಏರಿಕೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಯಾವುದೇ ಸೇನಾ ನೇಮಕಾತಿ ನಡೆದಿಲ್ಲದಿರುವುದರಿಂದ ಈ ಒಂದು ಬಾರಿ ಗರಿಷ್ಟ ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ.
ಈ ಕುರಿತು ಪಿಐಬಿ ಟ್ವೀಟ್ ಮಾಡಿದ್ದು “2022ರ ನೇಮಕಾತಿ ಪ್ರಕ್ರಿಯೆಯಲ್ಲಿ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಲಾಗಿದ್ದು 2022 ಕ್ಕೆ ಅಗ್ನಿಪಥ್ ಯೋಜನೆಗೆ ನೇಮಕಾತಿ ಪ್ರಕ್ರಿಯೆಯ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ.” ಎಂದು ಟ್ವೀಟ್ ಮಾಡಿದೆ.
ಜೂನ್ 14 ರಂದು, ಕೇಂದ್ರ ಸಚಿವ ಸಂಪುಟವು ಭಾರತೀಯ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಆಕರ್ಷಕ ನೇಮಕಾತಿ ಯೋಜನೆಯನ್ನು ಅನುಮೋದಿಸಿತು. ಈ ಯೋಜನೆಯನ್ನು ಅಗ್ನಿಪಥ್ ಎಂದು ಕರೆಯಲಾಗುತ್ತದೆ ಮತ್ತು ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅಗ್ನಿಪಥ್ ದೇಶಭಕ್ತಿ ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ.