ಡ್ರೇಸಿಂಗ್ ರೂಮ್ ನಲ್ಲಿರಲ್ಲ.. ಕ್ರಿಕೆಟ್ ಫ್ಯಾಕ್ಟರಿಯಲ್ಲಿರುತ್ತೇನೆ…ಮತ್ತೆ ಎನ್ ಸಿಎ ಮುಖ್ಯಸ್ಥಾನಾಗುತ್ತಾರಾ ರಾಹುಲ್ ದ್ರಾವಿಡ್
ಟೀಮ್ ಇಂಡಿಯಾದ ಮುಂದಿನ ಕೋಚ್ ಯಾರು ?
ಹಾಲಿ ಹೆಡ್ ಕೋಚ್ ರವಿಶಾಸ್ತ್ರಿಯವರ ಉತ್ತರಾಧಿಕಾರಿ ಯಾರು ?
ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೆಡ್ ಕೋಚ್ ರೇಸ್ ನಲ್ಲಿ ಯಾಕಿಲ್ಲ ?
ಎನ್ ಸಿಎ ಮುಖ್ಯಸ್ಥ ಸ್ಥಾನದ ಮೇಲೆ ರಾಹುಲ್ ದ್ರಾವಿಡ್ ಕಣ್ಣು ಮತ್ತೆ ಬಿದ್ದಿರುವುದು ಯಾಕೆ ?
ಎನ್ ಸಿ ಎ ಮುಖ್ಯಸ್ಥ ರಾಗಿ ರಾಹುಲ್ ದ್ರಾವಿಡ್ ಮುಂದುವರಿಯುತ್ತಾರಾ ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸದ್ಯದಲ್ಲೇ ಸಿಗಲಿದೆ.
ಎಲ್ಲರೂ ಅಂದುಕೊಂಡಿದ್ರು ಟೀಮ್ ಇಂಡಿಯಾದ ಮುಂದಿನ ಹೆಡ್ ಕೋಚ್ ರಾಹುಲ್ ದ್ರಾವಿಡ್ ಆಗ್ತಾರೆ ಅಂತ. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ಹೆಡ್ ಕೋಚ್ ಗೆ ರಾಹುಲ್ ದ್ರಾವಿಡ್ ಸೂಕ್ತ ಆಯ್ಕೆ ಕೂಡ ಅಂತ ಭಾವಿಸಿದ್ದರು. ಆದ್ರೆ ರಾಹುಲ್ ದ್ರಾವಿಡ್ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆ ತನಗೆ ಬೇಡ ಅಂತ ದ್ರಾವಿಡ್ ನಿರ್ಧರಿಸಿದಂತಿದೆ.
ತಾನು ಏನಿದ್ರೂ ಕ್ರಿಕೆಟ್ ಫ್ಯಾಕ್ಟರಿಯಲ್ಲಿರುತ್ತೇನೆ.. ಡ್ರೇಸಿಂಗ್ ರೂಮ್ ನಲ್ಲಿ ಇರುವುದಿಲ್ಲ. ಟೀಮ್ ಇಂಡಿಯಾಗೆ ಬೇಕಾಗಿರುವ ಯುವ ಆಟಗಾರರನ್ನು ತಯಾರು ಮಾಡುತ್ತೇನೆ…. ಅದರಲ್ಲೇ ಸಾರ್ಥಕತೆ ಇದೆ ಎಂಬ ಭಾವನೆಯಲ್ಲಿದ್ದಾರೆ ನಮ್ಮ ರಾಹುಲ್ ದ್ರಾವಿಡ್.
ಹೌದು, ರಾಹುಲ್ ದ್ರಾವಿಡ್ ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥನ ಹುದ್ದೆಗೆ ಮರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಎನ್ ಸಿಎ ಮುಖ್ಯಸ್ಥರಾಗಿ ಕಳೆದ ಎರಡು ವರ್ಷಗಳಿಂದ ರಾಹುಲ್ ದ್ರಾವಿಡ್ ಸೇವೆ ಸಲ್ಲಿಸುತ್ತಿದ್ದಾರೆ. ಈ ಎರಡು ವರ್ಷಗಳ ಒಪ್ಪಂದ ಮುಗಿದಿದೆ. ಇದೀಗ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಮುಂದುವರಿಸುವ ಬಗ್ಗೆ ಹೊಸ ನಿಯಮದ ಪ್ರಕಾರ ಅವಕಾಶವಿಲ್ಲ. ಹೀಗಾಗಿ ಈ ಹುದ್ದೆಗೆ ಹೊಸದಾಗಿ ಆಯ್ಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಹುಲ್ ದ್ರಾವಿಡ್ ಅವರು ಮರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಈ ನಡುವೆ ಹೊಸ ನೇಮಕಾತಿ ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸುವ ಸಮಯವನ್ನು ಕೂಡ ವಿಸ್ತರಿಸಲಾಗಿದೆ. ಆದ್ರೆ ರಾಹುಲ್ ದ್ರಾವಿಡ್ ಮರು ಅರ್ಜಿ ಸಲ್ಲಿಸಿರುವುದರಿಂದ ಅವರಿಗಿಂತ ಈ ಹುದ್ದೆಗೆ ಶ್ರೇಷ್ಠ ವ್ಯಕ್ತಿ ಸಿಗೋದಿಲ್ಲ. ಹೀಗಾಗಿ ರಾಹುಲ್ ದ್ರಾವಿಡ್ ಎನ್ ಸಿಎ ಮುಖ್ಯಸ್ಥರಾಗಿ ಮರು ಆಯ್ಕೆಯಾಗೋದು ಬಹುತೇಕ ಖಚಿತವಾಗಿದೆ.
ಅಷ್ಟಕ್ಕೂ ರಾಹುಲ್ ದ್ರಾವಿಡ್ ಎನ್ ಸಿಎನಲ್ಲಿ ಮಾಡಿರುವ ಕೆಲಸಗಳನ್ನು ಯಾರು ಮರೆಯುವಂತಿಲ್ಲ. ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾದ ಯಶಸ್ವಿ ಪ್ರದರ್ಶನದ ಹಿಂದೆ ರಾಹುಲ್ ದ್ರಾವಿಡ್ ಅವರು ದೂರದೃಷ್ಟಿ ಇದೆ. ಯುವ ಆಟಗಾರರು ಸಾಲು ಸಾಲಾಗಿ ಟೀಮ್ ಇಂಡಿಯಾದ ಕದ ಕೂಡ ತಟ್ಟುವಂತೆ ಮಾಡಿರುವುದಕ್ಕೆ ರಾಹುಲ್ ದ್ರಾವಿಡ್ ಕಾರಣ ಎಂಬುದನ್ನು ಮರೆಯುವ ಹಾಗಿಲ್ಲ.
ಈ ನಡುವೆ ಕಳೆದ ಶ್ರೀಲಂಕಾ ಸರಣಿಗೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಏಕದಿನ ಸರಣಿಯನ್ನು ಗೆದ್ದುಕೊಂಡ ಟೀಮ್ ಇಂಡಿಯಾ ಟಿ-ಟ್ವೆಂಟಿ ಸರಣಿಯಲ್ಲಿ ಮಾಡಿರುವ ಪ್ರಯೋಗದಿಂದ ಸೋಲು ಅನುಭವಿಸಿತ್ತು. ಆದ್ರೆ ರಾಹುಲ್ ದ್ರಾವಿಡ್ ಅವರ ಈ ನಿರ್ಧಾರ ಯುವ ಆಟಗಾರರಿಗೆ ಸ್ಪೂರ್ತಿಯಾಗಿತ್ತು. ಅಲ್ಲದೆ 15ರ ಬಳಗದ ಎಲ್ಲಾ ಆಟಗಾರರನ್ನು ಆಡಿಸುತ್ತೇನೆ ಅಂತ ಮಾತು ಕೂಡ ಕೊಟ್ಟಿದ್ದರು. ಮಾತಿನಂತೆ ರಾಹುಲ್ ದ್ರಾವಿಡ್ ಎಲ್ಲಾ ಆಟಗಾರರಿಗೂ ಅವಕಾಶ ನೀಡಿದ್ರು. ಆದ್ರೆ ಯುವ ಆಟಗಾರರು ರಾಹುಲ್ ದ್ರಾವಿಡ್ ಅವರ ನಿರೀಕ್ಷೆ ಮತ್ತು ನಂಬಿಕೆಯನ್ನು ಹುಸಿಗೊಳಿಸಿದ್ದರು.
ಅದೇನೇ ಇರಲಿ, ಆಟದಲ್ಲಿ ಸೋಲು ಗೆಲುವು ಇದ್ದದ್ದೇ. ಆದ್ರೆ ತಂಡಕ್ಕೆ ಆಯ್ಕೆಯಾದ ಆಟಗಾರರು ಅವಕಾಶ ವಂಚಿತರಾಗಬಾರದು ಅನ್ನೋ ರಾಹುಲ್ ದ್ರಾವಿಡ್ ಅವರ ಮನೋಭಾವನೆಯನ್ನು ಮೆಚ್ಚಲೇಬೇಕು.
ಇನ್ನು ರವಿಶಾಸ್ತ್ರಿಯವರ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ನಿಗೂಢವಾಗಿದೆ. ರಾಹುಲ್ ದ್ರಾವಿಡ್ ರೇಸ್ ನಲ್ಲಿಲ್ಲ. ಹಾಗಿದ್ರೆ ಟೀಮ್ ಇಂಡಿಯಾದ ಹೆಡ್ ಕೋಚ್ ಯಾರು ಅನ್ನೋದನ್ನು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.
ಅಷ್ಟಕ್ಕೂ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆ ಬೇಡ ಅಂತ ರಾಹುಲ್ ದ್ರಾವಿಡ್ ನಿರ್ಧಾರ ಮಾಡಿದ್ದು ಯಾಕೆ ? ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗೋದು ರಾಹುಲ್ ದ್ರಾವಿಡ್ ಗೆ ಕಷ್ಟ ಅಂತ ಅನ್ನಿಸಿದೆಯಾ ಅನ್ನೋ ಪ್ರಶ್ನೆ ಕೂಡ ಮೂಡುತ್ತಿದೆ.
ಯಾಕೆ ಅಂದ್ರೆ ಈ ಹಿಂದೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಇತ್ತು. ಹೀಗಾಗಿಯೇ ಅನಿಲ್ ಕುಂಬ್ಳೆ ಕೋಚ್ ಹುದ್ದೆಯಿಂದ ಹೊರ ನಡೆದು ಬಂದಿದ್ದರು ಎಂಬುದು ಗೊತ್ತಿಲ್ಲದ ವಿಚಾರವೇನು ಅಲ್ಲ.
ಬಹುಶಃ ಕೋಚ್ ಮತ್ತು ನಾಯಕನ ಸಂಬಂಧ ಚೆನ್ನಾಗಿದ್ರೆ ಮಾತ್ರ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಹಾಗಾಗಿಯೇ ರಾಹುಲ್ ದ್ರಾವಿಡ್ ಅವರು ತನಗೆ ಕೋಚ್ ಹುದ್ದೆ ಬೇಡ ಅಂತ ನಿರ್ಧಾರ ಮಾಡಿರಬೇಕು. ಅದು ಅಲ್ಲದೆ ರಾಹುಲ್ ದ್ರಾವಿಡ್ ಕೂಲ್ ಆಗಿಯೇ ತಂಡವನ್ನು ನಿಭಾಯಿಸುತ್ತಾರೆ. ವಿರಾಟ್ ಕೊಹ್ಲಿ ಪಕ್ಕಾ ಒರಟ. ಆಕ್ರಮಣಕಾರಿ ಪ್ರವೃತ್ತಿಯ ಆಟಗಾರ. ಹೀಗಾಗಿ ಹೆಡ್ ಕೋಚ್ ಹುದ್ದೆಯಿಂದಾಗಿ ತಂಡದ ಮೇಲೆ ಪರಿಣಾಮ ಬೀರಬಾರದು ಅನ್ನೋ ಕಾರಣಕ್ಕೆ ರಾಹುಲ್ ದ್ರಾವಿಡ್ ಭಾರತದ ಕ್ರಿಕೆಟ್ ಫ್ಯಾಕ್ಟರಿ ಎನ್ ಸಿಎ ನಲ್ಲಿರುತ್ತೇನೆ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ ಅಂತ ಅನ್ಸುತ್ತೆ.







