ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ರಾಹುಲ್ ಯಾಕಿಲ್ಲ..?
ಕೆ.ಎಲ್. ರಾಹುಲ್..
ಕೆಲವು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟಿಗ ಅನ್ನೋ ಹಣೆಪಟ್ಟಿ ಪಡೆದಿದ್ದ ಆಟಗಾರ. ಆದ್ರೆ ಕ್ರಿಕೆಟ್ ಜಗತ್ತಿನಲ್ಲಿ ಆಗುತ್ತಿದ್ದ ಬದಲಾವಣೆಗೆ ತಕ್ಕಂತೆ ತನ್ನ ಬ್ಯಾಟಿಂಗ್ ಕಲೆಯನ್ನು ಸುಧಾರಿಸಿಕೊಂಡ್ರು. ಪರಿಣಾಮ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ಆಧಾರಸ್ತಂಭವಾಗುತ್ತಿರುವ ಕೆ.ಎಲ್. ರಾಹುಲ್ ಅವರ ಕಳೆದ ಎರಡು ವರ್ಷಗಳ ಸಾಧನೆ ಅಪ್ರತಿಮವಾಗಿದೆ. ಕಳೆದ ಐಪಿಎಲ್ ಟೂರ್ನಿಯಲ್ಲೂ ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಯಲ್ಲೂ ಗಮನ ಹರಿಸುವಂತಹ ಸಾಧನೆ ಮಾಡಿದ್ದರು.
ಆದ್ರೆ ಕೆ.ಎಲ್. ರಾಹುಲ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ರೂ 11ರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮೊದಲ ಟೆಸ್ಟ್ ನಲ್ಲಿ ಸ್ಥಾನ ಪಡೆಯದ ರಾಹುಲ್, ಎರಡನೇ ಟೆಸ್ಟ್ ನಲ್ಲಿ ಆಡುತ್ತಾರೆ ಅನ್ನೋ ನಿರೀಕ್ಷೆ ಇತ್ತು.
ಆದ್ರೆ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲೂ ರಾಹುಲ್ ಗೆ ಸ್ಥಾನ ನೀಡಲಾಗಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲ ತಾಣದಲ್ಲಿ ಕಿಡಿ ಕಾರುತ್ತಿದ್ದಾರೆ.
ಅಷ್ಟಕ್ಕೂ ರಾಹುಲ್ ಅವರಿಗೆ 11ರ ಬಳಗದಲ್ಲಿ ಯಾಕೆ ಅವಕಾಶ ನೀಡಲ್ಲ ಅನ್ನೋ ಪ್ರಶ್ನೆಗೆ ಉತ್ತರ ನಿಗೂಢವಾಗಿದೆ. ಒಂದು ಕಡೆ ವಿರಾಟ್ ಕೊಹ್ಲಿ ಅನುಪಸ್ಥಿತಿ ಮತ್ತೊಂದೆಡೆ ಮೊದಲ ಟೆಸ್ಟ್ ಪಂದ್ಯ ಸೋಲು. ಇನ್ನೊಂದೆಡೆ ಸರಣಿಯಲ್ಲಿ ಅಂತರವನ್ನು ಸಮಗೊಳಿಸುವ ಸವಾಲು. ಹೀಗೆ ಟೀಮ್ ಇಂಡಿಯಾ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಕೆ.ಎಲ್. ರಾಹುಲ್ 11ರ ಬಳಗದಲ್ಲಿರಬೇಕಿತ್ತು.
ಆದ್ರೆ ಅವಕಾಶ ನೀಡಿಲ್ಲ. ಯಾಕಂದ್ರೆ ರಾಹುಲ್ ಬದಲು ಇನಿಂಗ್ಸ್ ಆರಂಭಿಸುವುದಾದ್ರೆ ಶುಬ್ಮನ್ ಗಿಲ್ ಅವರನ್ನು ಹೊರಗಿಡಬೇಕಾಗಿತ್ತು. ಒಂದು ವೇಳೆ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವುದಾದ್ರೆ ಹನುಮ ವಿಹಾರಿಗೆ ಚಾನ್ಸ್ ಸಿಕ್ಕಿರಲಿಲ್ಲ. ಇಲ್ಲಿ ಟೀಮ್ ಮ್ಯಾನೇಜ್ ಮೆಂಟ್ ಆರಂಭಿಕನಾಗಿ ಶುಬ್ಮನ್ ಗಿಲ್‍ಗೆ ಚಾನ್ಸ್ ನೀಡಿದ್ರೆ, ಹನುಮ ವಿಹಾರಿಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲಾಗಿದೆ.
ಆದ್ರೂ ಹನುಮ ವಿಹಾರಿ ಬದಲು ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಗೆ ಅವಕಾಶ ನೀಡಬಹುದಿತ್ತು. ಮೊದಲೇ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಟಗಾರರ ಕೊರತೆ ಕಾಡುತ್ತಿದೆ. ಚೇತೇಶ್ವರ ಪೂಜಾರ ಮತ್ತು ನಾಯಕ ರಹಾನೆ ಮಾತ್ರ ನಂಬಿಕಸ್ಥ ಬ್ಯಾಟ್ಸ್ ಮೆನ್ ಗಳು. ಹೀಗಾಗಿ ಅನುಭವಿ ರಾಹುಲ್ ಗೆ ವಿಹಾರಿ ಬದಲು ಅವಕಾಶ ನೀಡಬಹುದಿತ್ತು. ಒಂದು ವೇಳೆ ಹನುಮ ವಿಹಾರಿಯವರನ್ನು ಆಡಿಸಲೇಬೇಕು ಅನ್ನೋದಾದ್ರೆ ವಿಕೆಟ್ ಕೀಪರ್ ರಿಷಬ್ ಪಂತ್ ಬದಲು ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಆಗಿ ರಾಹುಲ್ ಅವರಿಗೆ ಚಾನ್ಸ್ ನೀಡಬಹುದಿತ್ತು.
ಆದ್ರೆ ಕೆ.ಎಲ್. ರಾಹುಲ್ ಅವರನ್ನು ಮೂರು ಮಾದರಿಯಲ್ಲೂ ಕಡೆಗಣಿಸಲಾಗಿದೆ. ಈಗಾಗಲೇ ಕ್ರಿಕೆಟ್ ಪಂಡಿತರು ಕೂಡ ರಾಹುಲ್ ಅವರನ್ನು ಕಡೆಗಣಿಸಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ರಾಹುಲ್ 2018ರ ಆಸೀಸ್ ಸರಣಿಯಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದು ಕಾರಣವಲ್ಲ. ಯಾಕಂದ್ರೆ ರಾಹುಲ್ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಪಕ್ವಗೊಂಡಿದ್ದಾರೆ. ಸದ್ಯ ಅತ್ಯುತ್ತಮ ಫಾರ್ಮ್‍ನಲ್ಲೂ ಕೂಡ ಇದ್ದಾರೆ.
ಒಟ್ಟಿನಲ್ಲಿ ಕೋಚ್ ರವಿಶಾಸ್ತ್ರಿ ಮೈಂಡ್ ನಲ್ಲಿ ಏನಿದೆ ಎಂಬುದೇ ಗೊತ್ತಾಗುತ್ತಿಲ್ಲ. ಮಹತ್ವದ ಪಂದ್ಯದಲ್ಲಿ ರಾಹುಲ್ ನಂತಹ ಅನುಭವಿ ಆಟಗಾರರಿಗೆ ಅವಕಾಶ ನೀಡದಿರುವುದು ಸರಿಯಲ್ಲ.