ರಾಜ್ಯ ರಾಜಕಾರಣದಲ್ಲಿ ಸಿಎಂ ಸ್ಥಾನ ಹಾಗೂ ಅವಧಿ ಕುರಿತ ಚರ್ಚೆ ತೀವ್ರವಾಗುತ್ತಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಐದು ವರ್ಷ ಸಿದ್ದರಾಮಯ್ಯ ಅವರು ಯಾಕೆ ಸಿಎಂ ಆಗಿರಬಾರದು? ಎಂದು ಪರಮೇಶ್ವರ್ ಪ್ರಶ್ನೆ ಎತ್ತಿದ್ದು, ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಗಾಳಿಸುದ್ದಿಗಳಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂದು ನೀಡಿದ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದರು. ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದರೆ ಅದು ಸಂತೋಷದ ವಿಚಾರ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಈಗ ಅತ್ಯಂತ ಅಗತ್ಯವಿರುವುದು ಸ್ಥಿರವಾದ ಆಡಳಿತ. ಸದ್ಯದ ಸರ್ಕಾರ ರಾಜ್ಯಕ್ಕೆ ಸ್ಥಿರತೆ ನೀಡುತ್ತಿದೆ. ಇಂತಹ ಸಂದರ್ಭದಲ್ಲಿಅನಗತ್ಯ ಗೊಂದಲ ಬೇಕಾಗಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಹೇಳಿಕೆಯೊಂದಿಗೆ, ಕಾಂಗ್ರೆಸ್ ನಾಯಕತ್ವದೊಳಗೆ ಸಿದ್ದರಾಮಯ್ಯ ಅವರ ನೇತೃತ್ವಕ್ಕೆ ಬೆಂಬಲ ಹೆಚ್ಚುತ್ತಿದೆ ಎಂಬ ಸಂದೇಶ ರವಾನೆಯಾಗಿದೆ. ಸಿಎಂ ಬದಲಾವಣೆ ಕುರಿತು ನಡೆಯುತ್ತಿರುವ ಊಹಾಪೋಹಗಳಿಗೆ ಪರಮೇಶ್ವರ್ ಅವರ ಹೇಳಿಕೆ ತಾತ್ಕಾಲಿಕ ವಿರಾಮ ನೀಡುವಂತೆ ಕಂಡುಬರುತ್ತಿದೆ.
ರಾಜಕೀಯ ವಲಯದಲ್ಲಿ ಈಗ ಎಲ್ಲರ ಕಣ್ಣುಗಳು ಹೈಕಮಾಂಡ್‌ನ ಅಧಿಕೃತ ಪ್ರತಿಕ್ರಿಯೆಯ ಮೇಲೆ ಕೇಂದ್ರೀಕೃತವಾಗಿವೆ. ಆದರೆ, ಗೃಹ ಸಚಿವರ ಈ ಹೇಳಿಕೆ ಸಿದ್ದರಾಮಯ್ಯ ಅವರ 5 ವರ್ಷಗಳ ಆಡಳಿತಕ್ಕೆ ಬಲವಾದ ಬೆಂಬಲ ಎನ್ನುವಂತಾಗಿದೆ.








