ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಡಿಸಿದ ಬಾಂಬ್ ಹೊಡೆತದ ಬಿಸಿ ಇನ್ನೂ ತಣ್ಣಗಾಗಿಲ್ಲ. ಸ್ಯಾಂಡಲ್‍ವುಡ್‍ನ ಯುವ ನಟರೇ ಹೆಚ್ಚು ಡ್ರಗ್ಸ್ ತೆಗೆದುಕೊಳ್ತಿದ್ದಾರೆ ಎಂದು ಹೇಳುತ್ತಿರುವುದಕ್ಕೆ ಗುಲಾಮಗಿರಿ ಚಿತ್ರದ ನಾಯಕ ಟೈಗರ್ ನಾಗ್ ಕಿಡಿಕಾರಿದ್ದಾರೆ.
ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮಕೈಗೊಳ್ಳಿ, ಆದರೆ, ಯುವ ನಟರು ಅಂತ ಪದೇ ಪದೇ ಹೇಳುವುದು ಸರಿಯಲ್ಲ. ಹಾಗಾದರೆ ಚಿತ್ರರಂಗದಲ್ಲಿರುವ ಹಳಬರು ಡ್ರಗ್ಸ್ ತೆಗೆದುಕೊಳ್ಳುತ್ತಿಲ್ಲವೇ ಎಂದು ಟೈಗರ್ ನಾಗ್ ಪ್ರಶ್ನಿಸಿದ್ದಾರೆ.
ಡ್ರಗ್ಸ್ ಮಾಫಿಯಾ ನಂಟಿನ ಸುದ್ದಿ ಹೊರಬೀಳುತ್ತಿದ್ದಂತೆ ಚಿತ್ರರಂಗಕ್ಕೆ ಬರುವವರ ಬಗ್ಗೆಯೇ ಅನುಮಾನದಿಂದ ನೋಡುವಂತಾಗಿದೆ. ಲಾಕ್‍ಡೌನ್ ಹಾಗೂ ಕೊರೊನಾ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಅರ್ಧಕ್ಕೆ ನಿಂತಿರುವ ಸಿನಿಮಾಗಳು ಪೂರ್ತಿ ಆಗುವುದು ಅನುಮಾನ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ನಮ್ಮ ಸಿನಿಮಾ `ಗುಲಾಮಗಿರಿ’ಯ ಚಿತ್ರೀಕರಣ ಶೇ.75ರಷ್ಟು ಮುಗಿದಿದೆ. ಆದರೂ ನನ್ನ ಚಿತ್ರ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಬಂದಿದೆ. ನಮ್ಮಂಥ ಹೊಸಬರನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಾ, ಕೆಲವು ನಿರ್ಮಾಪಕರು ಹೀಗೆಲ್ಲಾ ಇದೆಯಾ ಎಂದು ಯುವ ನಟರ ಸಿನಿಮಾಗಳಿಗೆ ಬ್ರೇಕ್ ಹಾಕುತ್ತಿದ್ದಾರೆ. ನೂರಾರು ಕನಸು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಬರುವವರಿಗೆ ಹತಾಶೆಯ ಭಾವನೆ ಮೂಡಲಾರಂಭಿಸಿದೆ ಎಂದು ಟೈಗರ್ ನಾಗ್ ಅಳಲು ತೋಡಿಕೊಂಡಿದ್ದಾರೆ.
*****************









