ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ವ್ಯಾಪಕ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ಗುಡುಗು ಸಹಿತವಾಗಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಬೆಂಗಳೂರಿನ (Bengaluru) ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ಬೆಂಗಳೂರಿನ ಕೆಂಗೇರಿ (Kengeri), ಆರ್.ಆರ್. ನಗರ, ದಾಸರಹಳ್ಳಿ ಭಾಗದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲೂ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಇಲ್ಲಿನ ಜನ ಜಲ ದಿಗ್ಬಂಧನ ಅನುಭವಿಸಿದ್ದಾರೆ.
ಓಕಳಿಪುರಂ ಅಂಡರ್ ಪಾಸ್ ಕೆರೆಯಂತಾಗಿದ್ದು, ಎರಡು ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ಜೆಜೆ ಆರ್ ನಗರದ ವಿಎಸ್ ಗಾರ್ಡನ್ನಲ್ಲಿ ಮೋರಿ ತಡೆಗೋಡೆ ಕುಸಿತಗೊಂಡು 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸರ್ಜಾಪುರ ಆರ್ಜಿಬಿ ಟೆಕ್ ಪಾರ್ಕ್ ಎದುರು ಜಲಾವೃತಗೊಂಡಿದೆ.
ಬೆಳ್ಳಂದೂರು ಕೆರೆ ಪಕ್ಕದಲ್ಲಿರುವ ಸಕ್ರ ಆಸ್ಪತ್ರೆಯ ರಸ್ತೆ ಕೆರೆಯಂತಾಗಿದೆ. ಇಡೀ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ವಿಲ್ಸನ್ ಗಾರ್ಡನ್ ಬಿಟಿಎಸ್ ಮುಖ್ಯ ರಸ್ತೆ ಜಲಾವೃತವಾಗಿದೆ. ಬನ್ನೇರುಘಟ್ಟ ರಸ್ತೆಯ ವಿಜಯಶ್ರೀ ಲೇಔಟ್ ಹಾಗೂ ಹುಳಿಮಾವು ಮೆಟ್ರೋ ಸ್ಟೇಷನ್ ಹತ್ತಿರ ರಸ್ತೆಗಳು ಜಲಾವೃತವಾಗಿದ್ದು, ಸವಾರರು ಪರದಾಟ ನಡೆಸುವಂತಾಗಿದೆ.