ವಿಧವೆಯ ಮೇಲೆ ಅತ್ಯಾಚಾರವೆಸಗಿದ ಐವರ ಬಂಧನ ಮೂವರಿಗಾಗಿ ಹುಡುಕಾಟ
ವಿಧವೆಯ ಅಸಹಾಯಕತೆಯನ್ನ ದುರುಪಯೋಗ ಪಡೆಸಿಕೊಂಡ ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಶಿರೂರಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ 8 ಆರೋಪಿಗಳ ಪೈಕಿ ಪೊಲೀಸರು ಈವರೆಗೂ ಐವರು ಆರೋಪಿಗಳನ್ನ ಬಂಧಿಸಿದ್ದು ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..
ಪುಣೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.. ಆರೋಪಿಗಳನ್ನ ಮೌಲಿ ಪವಾರ್, ಕಾಲು ವಾಲುಂಜ್, ವಿಠ್ಠಲ್ ಕಾಳೆ, ರಜಾಕ್ ಪಠಾಣ್, ಪಪ್ಪು ಗಾಯಕ್ವಾಡ್, ಆಕಾಶ್ ಗಾಯಕ್ವಾಡ್, ನವನಾಥ್ ವಾಲುಂಜ್ , ಸಂದೀಪ್ ವಾಲುಂಜ್ ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ವಿಧವೆಯಾಗಿದ್ದು, ಆಕೆಯ ಪರಿಸ್ಥಿತಿಯನ್ನ ದುರುಪಯೋಗಪಡಿಸಿಕೊಂಡು ಕೆಲವರು ಮೇ 2021ರಲ್ಲಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಗೆ ಯಾರದ್ದೂ ಬೆಂಬಲವಿಲ್ಲದೇ , ದೂರು ನೀಡುವ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದ ಕಾರಣ ಜೊತೆಗೆ , ಆರೋಪಿಗಳು ಜೀವ ಬೆದರಿಕೆ ಹಾಕಿದ್ದ ಕಾರಣ ಆಕೆ ಮೌನವಾಗಿದ್ದಳು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ನಿರ್ಭಯಾ ಘಟಕದ ತಂಡವು ಸಂತ್ರಸ್ತೆಯನ್ನ ಭೇಟಿ ಮಾಡಿ ವಿಚಾರಣೆ ನಡೆಸಿದಾಗ ಸಂತ್ರಸ್ತೆ ಆರೋಪಿಗಳ ಬಗ್ಗೆ ತಿಳಿಸಿದ ನಂತರ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಧೀಶರು ಅವರನ್ನು ಏಳು ದಿನಗಳ ಕಾಲ ಪೊಲೀಸ್‍ಗೆ ವಹಿಸಿದ್ದಾರೆ. ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗ್ತಿದೆ.








