ಮಂಗಳೂರು: ತಂದೆ ಹಾಗೂ ಮಗನ ಜಗಳಕ್ಕೆ ತಾಯಿ ಬಲಿಯಾಗಿದ್ದು, ಮನನೊಂದು ತಂದೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸುಳ್ಯದ ನೆಲ್ಲೂರು ಕೆಮ್ರಾಜೆ ಎಂಬಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ತಂದೆಯು ಕೋವಿಂದ ಮಗನಿಗೆ ಗುರಿ ಇಟ್ಟಾಗ ಪತ್ನಿ ಅಡ್ಡ ಬಂದಿದ್ದಾರೆ. ಈ ವೇಳೆ ಪತ್ನಿ ವಿನೋದಾ (42)ಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ತನ್ನಿಂದಾಗಿಯೇ ಈ ಘಟನೆ ನಡೆಯಿತು ಎಂದು ಬೇಸರಗೊಂಡ ಪತಿ ರಾಮಚಂದ್ರ ಗೌಡ (52) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರೋಪಿ ರಾಮಚಂದ್ರ ಪ್ರತಿದಿನವೂ ಕುಡಿದು ಬಂದು ಪತ್ನಿ ವಿನೋದಾ ಜೊತೆ ಜಗಳವಾಡುತ್ತಿದ್ದ. ಶುಕ್ರವಾರ ಕೂಡ ಎಂದಿನಂತೆ ಗಲಾಟೆ ಆರಂಭವಾದಾಗ ಮಗ ಪ್ರಶಾಂತ್ ಗಲಾಟೆ ತಡೆಯಲು ಮುಂದಾಗಿದ್ದಾನೆ. ಈ ವೇಳೆ ಪ್ರಶಾಂತ್‌ಗೆ ಕೋವಿಯನ್ನು ಗುರಿಯಾಗಿಸಿದ ಸಂದರ್ಭದಲ್ಲಿ ಪತ್ನಿ ವಿನೋದಾ ಅಡ್ಡ ಬಂದಿದ್ದಾರೆ. ಆಗ ಪತಿ ಗುಂಡು ಹಾರಿಸಿದ್ದಾನೆ. ಇದರಿಂದ ವಿನೋದಾ ಎದೆಗೆ ಗುಂಡು ಬಿದ್ದಿದೆ. ಹೀಗಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ಮನನೊಂದ ಆರೋಪಿ ಪತಿ ರಾಮಚಂದ್ರ ಗೌಡ ರಬ್ಬರ್‌ಗೆ ಬಳಸುವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಡಿದು ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ರಾಮಚಂದ್ರಗೌಡನ ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಇಡಿಸಲಾಗಿತ್ತು. ಆದರೆ, ಮೂರು ದಿನಗಳ ಹಿಂದೆಯಷ್ಟೇ ಪೊಲೀಸ್ ಠಾಣೆಯಿಂದ ಕೋವಿ ತರಲಾಗಿತ್ತು. ಪತ್ನಿ ಪೊಲೀಸರಲ್ಲಿ ಮನವಿ ಮಾಡಿ ಕೋವಿ ತರಿಸಿಕೊಂಡಿದ್ದರು. ಆದರೆ, ಈಗ ಅವರೇ ಅದಕ್ಕೆ ಬಲಿಯಾಗಿದ್ದಾರೆ.








