ಉಡುಪಿ: ಪತಿ ಹಾಗೂ ಪತ್ನಿಯ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು, ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯಲ್ಲಿ (Udupi) ನಡೆದಿದೆ. ಸದ್ಯದ ಮಾಹಿತಿಯಂತೆ ಪತ್ನಿ ಮೊಬೈಲ್ ನಲ್ಲಿ ಯಾವಾಗಲೂ ಬ್ಯುಸಿಯಾಗಿರುತ್ತಿದ್ದಳು ಎಂಬ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕಾರ್ಕಡ ಹೆದ್ದಾರಿ ಅಂಗನವಾಡಿ ಕೇಂದ್ರದ ಸಮೀಪದಲ್ಲಿ ಕಿರಣ್ ಮತ್ತು ಜಯಶ್ರೀ ದಂಪತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬೀದರ್ ಮೂಲದ ಜಯಶ್ರೀ ಜೊತೆ 8 ತಿಂಗ ಹಿಂದೆ ಕಿರಣ್ ಮದುವೆಯಾಗಿತ್ತು. ಕಿರಣ್ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದಲ್ಲಿ ಎರಡು ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ.
ಆದರೆ, ಮನೆಯ ಟೆರೇಸ್ ನಿಂದ ಬಿದ್ದು ಗಾಯಗೊಂಡಿರುವುದಾಗಿ ಪತಿ ಕಿರಣ್ ಗಾಯಾಳು ಪತ್ನಿಯನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ನಂತರ ಹೆಚ್ಚಿನ ಚಿಕಿತ್ಸೆಗೆಂದು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಜಯಶ್ರೀ ಸದಾ ಮೊಬೈಲ್ ನಲ್ಲಿ, ರೀಲ್ಸ್ ನಲ್ಲಿ ಬ್ಯುಸಿ ಇರುತ್ತಿದ್ದ ಬಗ್ಗೆ ಪತಿ ಕಿರಣ್ ದೂರುತ್ತಿದ್ದ. ಇದೇ ಕಾರಣಕ್ಕೆ ಜಗಳ ನಡೆದು, ಪತಿ ಚಾಕುವಿನಿಂದ ಹಲ್ಲೆ ನಡೆಸಿರುವ ಸಾಧ್ಯತೆಯಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.