ಬೆಂಗಳೂರು : ಬಿಜೆಪಿ ಕೇಂದ್ರ ಸಮಿತಿ ಕೊಟ್ಟ ಶಾಕ್ ಗೆ ರಾಜ್ಯ ಬಿಜೆಪಿ ತಲ್ಲಣವಾಗಿದೆ. ರಾಜ್ಯಸಭೆಯ ಟಿಕೆಟ್ ಕೈ ತಪ್ಪಿದಕ್ಕೆ ಪ್ರಭಾಕರ್ ಕೋರೆ ಸುಮ್ಮನಾಗಬಹುದು, ಆದರೆ ಉಮೇಶ್ ಕತ್ತಿ ಸುಮ್ಮನಾಗುತ್ತಾರಾ ? ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಶಾಸಕ ಹಾಗೂ ಬಿಜೆಪಿಯ ಹಿರಿಯ ನಾಯಕ ಉಮೇಶ್ ಕತ್ತಿ ಮೊದಲಿಂದಲೂ ತಮ್ಮ ಕತ್ತಿ ವರಸೆ ತೋರಿಸುತ್ತಾ ಬಂದಿದ್ದಾರೆ. ಅಲ್ಲದೆ ಶಾಸಕ ಉಮೇಶ್ ಕತ್ತಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಕೆಲ ದಿನಗಳ ಹಿಂದೆ ಉಮೇಶ್ ಕತ್ತಿ ಅವರ ಮನೆಯಲ್ಲಿ ಡಿನ್ನರ್ ಪಾರ್ಟಿ ನಡೆದಿದೆ. 1985ರಲ್ಲಿ ವಿಶೇಶ್ವರಯ್ಯ ಕತ್ತಿ ವಿಧಾನಸಭೆಗೆ ಆಯ್ಕೆಯಾದಂದಿನಿಂದ ಇಂದಿನವರೆಗೆ ಹುಕ್ಕೇರಿಯ ಕತ್ತಿ ಕುಟುಂಬ ಉತ್ತರ ಕರ್ನಾಟಕದ ಪ್ರಮುಖ ರಾಜಕೀಯ ಪ್ರಾಬಲ್ಯವಿರುವ ಕುಟುಂಬ ಎಂದು ಗುರುತಿಸಿಕೊಂಡಿದೆ. ಹಾಗಾಗಿ ಉತ್ತರ ಕರ್ನಾಟಕ ಭಾಗದ ರಾಜಕೀಯದ ಮೇಲೆ ಉಮೇಶ್ ಹಿಡಿತ ಹೊಂದಿದ್ದಾರೆ. ಉಮೇಶ್ ಕತ್ತಿ ನಿರಂತರವಾಗಿ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. 2009 ರ ಲೋಕಸಭಾ ಚುನಾವಣೆಯಲ್ಲಿ ರಮೇಶ್ ಕತ್ತಿ ಜಯ ದಾಖಲಿಸಿದ್ದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಉಮೇಶ್ ಕತ್ತಿ ಇಟ್ಟಿದ್ದ ಬೇಡಿಕೆ ಇಟ್ಟಿದ್ದರು. ಇದನ್ನು ಈ ಭಾಗದ ಹಿರಿಯ ರಾಜಕಾರಣಿಗಳು ಬೆಂಬಲಿಸಿದ್ದರು. ಅಲ್ಲದೆ ಹಲವಾರು ಸಕ್ಕರೆ ಕಾರ್ಖಾನೆಗಳು, ಸಹಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮೇಲೆ ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಹಿಡಿತ ಸಾಧಿಸಿದ್ದಾರೆ.
ಕತ್ತಿ ವರಸೆಗೆ ಸಚಿವ ಸ್ಥಾನ ಸಿಗುತ್ತಾ ?
ಪ್ರಭಾವವನ್ನು ಹೊಂದಿರುವ ಕತ್ತಿ ಕುಟುಂಬ ಬಿಜೆಪಿಯಲ್ಲಿ ಪದೆ ಪದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಉಮೇಶ್ ಕತ್ತಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನವಿದೆ. ಹಾಗಾಗಿ ತಮಗೆ ಸಚಿವ ಸ್ಥಾನ ಸಿಗದೆ ಹೋದರು ಪರವಾಗಿಲ್ಲ, ತಮ್ಮ ಸಹೋದರ ರಮೇಶ್ ಕತ್ತಿಗೆ ಈ ಬಾರಿ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡಿ ಎಂದು ಉಮೇಶ್ ಕತ್ತಿ ಪಟ್ಟು ಹಿಡಿದಿದ್ದರು. ಆದರೆ ಕೊನೆ ಕ್ಷಣದಲ್ಲಿ ರಾಜ್ಯಸಭೆ ಟಿಕೆಟ್ ಬೇರೆಯವರ ಪಾಲಾಗಿದೆ. ಇದರಿಂದ ಉಮೇಶ್ ಕತ್ತಿ ಮತ್ತಷ್ಟು ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಹಾಗಾಗಿ ರಾಜ್ಯಸಬೆ ನಾಮಪತ್ರ ಸಲ್ಲಿಕೆಯ ನಂತರ ನಡೆಯುವ ಸಚಿವ ಸಂಪುಟ ಸರ್ಜರಿಯಲ್ಲಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಿ ಸಮಾಧಾನ ಮಾಡುವ ತಂತ್ರಕ್ಕೆ ಬಿಜೆಪಿ ಮುಂದಾಗಲಿದೆ ಎಂಬ ಮಾತುಗಳ ಕೇಳಿ ಬಂದಿವೆ.
ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಂಡಾಯದ ಬಿಸಿಯನ್ನು ಕಡಿಮೆ ಮಾಡಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ ಎಂದು ಹೇಳಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯಸಭೆ ಟಿಕೆಟ್ ವಂಚಿತ ರಮೇಶ್ ಕತ್ತಿ ,ಉಮೇಶ್ ಕತ್ತಿ ಅವರು ಸಚಿವರಾಗುತ್ತಾರೆ. ಬಂಧಿಖಾನೆ ಮಂತ್ರಿ, ಉಪಮುಖ್ಯಮಂತ್ರಿ, ಅಥಾವ ಬೇರೆ ಯಾವುದೇ ಮಂತ್ರಿ ಸ್ಥಾನ ಕೊಟ್ಟರು ಸರಿ ಎಂದು ಹೇಳಿದ್ದಾರೆ. ಹಾಗಾಗಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಿ ಬಂಡಾಯ ಶಮನ ಮಾಡುವ ಪ್ಲ್ಯಾನ್ ಬಿಜೆಪಿ ಮಾಡಿದೆ ಎಂಬ ಮಾತುಗಳು ಕೇಳಿ ಬಂದಿವೆ.








