ಬೆಂಗಳೂರು: ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ವಿದೇಶಿ ನೆಲದಲ್ಲಿ ನಿಂತು ತಮ್ಮ ದೇಶದ ವಿರುದ್ಧ ಮಾತನಾಡುವ ಜಾಯಮಾನ ನನ್ನದಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದೇಶದ ಘನತೆ ಮತ್ತು ಗೌರವವೇ ತಮಗೆ ಅಂತಿಮ ಎಂದು ಅವರು ಪುನರುಚ್ಚರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ವಿದೇಶದಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ಟೀಕಿಸಿದ ಸಂದರ್ಭದಲ್ಲಿಯೂ ನೀವು ಭಾರತವನ್ನು ಹೊಗಳಿದ್ದೀರಿ ಎಂಬ ಪ್ರಶ್ನೆಗೆ ಬಹಳ ಪ್ರಬುದ್ಧವಾಗಿ ಉತ್ತರಿಸಿದರು. ರಾಜಕೀಯ ಲಾಭಕ್ಕಾಗಿ ನಾನು ಭಾರತವನ್ನು ಬೈಯಲು ಸಾಧ್ಯವಿಲ್ಲ. ನನಗೆ ನನ್ನದೇ ಆದ ರಾಜಕೀಯ ಅನುಭವವಿದೆ, ಆ ಅನುಭವದ ಆಧಾರದ ಮೇಲೆಯೇ ನಾನು ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.
ರಾಹುಲ್ ಗಾಂಧಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿಕೆಶಿ, ರಾಹುಲ್ ಗಾಂಧಿಯವರು ದೇಶದ ವಿರುದ್ಧವಾಗಿ ಹೇಳಿಕೆ ನೀಡಿಲ್ಲ. ಅವರು ಯಾವ ಸನ್ನಿವೇಶದಲ್ಲಿ ಮಾತನಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರು ಕೇವಲ ಆಂತರಿಕ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ ಹೊರತು ದೇಶದ ವಿರುದ್ಧವಲ್ಲ ಎಂದು ಸ್ಪಷ್ಟನೆ ನೀಡಿದರು.
ನಾವು ಮೊದಲು ಭಾರತೀಯರು
ನಾನು ಜಗತ್ತಿನ ಯಾವುದೇ ದೇಶಕ್ಕೆ ಹೋದರೂ, ನಮ್ಮ ದೇಶಕ್ಕೆ ಧಕ್ಕೆ ತರುವಂತಹ ಅಥವಾ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡುವುದಿಲ್ಲ. ನಾವು ಎಷ್ಟೇ ರಾಜಕೀಯ ಮಾಡಿದರೂ, ಅಂತಿಮವಾಗಿ ನಮ್ಮ ದೇಶವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಮೊದಲು ನಾವೆಲ್ಲರೂ ಭಾರತೀಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಭಾವನಾತ್ಮಕವಾಗಿ ನುಡಿದರು.ಭಾರತದ ಅಭಿವೃದ್ಧಿಯಲ್ಲಿ ಪಕ್ಷಾತೀತವಾಗಿ ಎಲ್ಲರ ಕೊಡುಗೆಯೂ ಇದೆ.








