ದೆಹಲಿ ಬಿಟ್ಟು ಲಕ್ನೋದತ್ತ ಪ್ರಿಯಾಂಕಾ ಗಾಂಧಿ ವಾದ್ರಾ ಚಿತ್ತ ?
ಹೊಸದಿಲ್ಲಿ, ಜುಲೈ 3: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೇಂದ್ರ ಸರ್ಕಾರ ಈಗಾಗಲೇ ಅವರು ವಾಸವಾಗಿರುವ ದೆಹಲಿಯ ಲೋಧಿ ಎಸ್ಟೇಟ್ ನ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದೆ. ಮೂಲಗಳ ಪ್ರಕಾರ ಉತ್ತರಪ್ರದೇಶ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರಪ್ರದೇಶದ ಲಕ್ನೋ ಬಂಗ್ಲೆಯಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಹೆಚ್ಚಾಗಿ ಇದೆ ಎಂದು ಹೇಳಲಾಗಿದೆ.

ಲಕ್ನೋದಲ್ಲಿ ಕಾಂಗ್ರೆಸ್ ಪಕ್ಷದ ನೆಲೆ ಸುಭದ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ದೃಷ್ಟಿಯಿಂದ ಲಕ್ನೋದ “ಕೌಲ್ ಹೌಸ್” ಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಕೌಲ್ ಹೌಸ್ ಇಂದಿರಾ ಗಾಂಧಿ ಸಂಬಂಧಿ ಶೀಲಾ ಕೌಲ್ ಅವರಿಗೆ ಸೇರಿದ್ದಾಗಿದೆ. ಕೌಲ್ ಕೂಡಾ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕಿಯಾಗಿದ್ದು, ಈ ಹಿಂದೆ ಕೇಂದ್ರ ಸಚಿವೆಯಾಗಿದ್ದರು. ಈ ನಡುವೆ ಕೌಲ್ ಹೌಸ್ ನ ಪುನರ್ ನವೀಕರಣ ಕೆಲಸ ಸಂಪೂರ್ಣಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಯನ್ನು ಬಿಟ್ಟು ಲಕ್ನೋದತ್ತ ಮುಖ ಮಾಡಿರಲು ಕಾರಣ 2022 ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ತಯಾರಿಗಾಗಿ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಿಯಾಂಕಾ ಚುನಾವಣೆಗೂ ಮುನ್ನ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು, ಹೆಚ್ಚು ಕಾಲ ಕಳೆಯುವ ಇಚ್ಛೆ ಹೊಂದಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ಗೆ ಒಂದು ಬಲಿಷ್ಠವಾದ ತಳಹದಿ ನಿರ್ಮಿಸುವ ಉದ್ದೇಶದಿಂದ ಅವರು ಲಕ್ನೋಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.








