ವೀಕೆಂಡ್ ಕಫ್ರ್ಯೂ ಮುಂದುವರೆಸ್ತಾರಾ : ಡಿವಿಎಸ್ ಹೇಳಿದ್ದೇನು..?
ಬೆಂಗಳೂರು : ರಾಜ್ಯದಲ್ಲಿ ವೀಕೆಂಡ್ ಕಫ್ರ್ಯೂ ಯಶಸ್ವಿಯಾಗಿದ್ದು, ಇದನ್ನು ಈ ವಾರ ಪೂರ್ತಿ ಮುಂದುವರೆಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮಾತುಗಳು ಕೇಳಿಬರುತ್ತಿವೆ.
ಈ ಮಧ್ಯೆ ಈ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದು, ಕಫ್ರ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಸಂಪುಟ ಸಚಿವರ ಜೊತೆ ಚರ್ಚಿಸಿ ಸಿಎಂ ನಿರ್ಧಾರ ಮಾಡ್ತಾರೆ. ಅಗತ್ಯ ಬಿದ್ದರೆ ಮುಂದುವರೆಸುತ್ತಾರೆ. ಅದು ಅವರಿಗೆ ಬಿಟ್ಟದ್ದು ಎಂದಿದ್ದಾರೆ.
ವಿಧಾನಸೌಧದಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಕರ್ನಾಟಕ ಕೊರೊನಾ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡುತ್ತಿದ್ದು, ಕೇಂದ್ರ ಸರ್ಕಾರ ಎಲ್ಲಾ ನೆರವನ್ನು ರಾಜ್ಯಕ್ಕೆ ನೀಡಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಅತಿ ಹೆಚ್ಚು ಸೊಂಕು ಕಾಣಿಸಿಕೊಂಡಿದೆ. ಹೀಗಾಗಿ ನಾವು ತುಂಬಾ ಜಾಗೃತರಾಗಿರಬೇಕು. ಇನ್ನೂ ಹೆಚ್ಚಾಗುವಂತಹ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.
ನಾವು ಯಶಸ್ವಿಯಾಗಿ ಕಂಟ್ರೋಲ್ ಮಾಡುತ್ತೇವೆ. ಸಾವು ಸಂಭವಿಸಿರೋದು ನಮಗೂ ಮನಸ್ಸಿಗೆ ನೋವು ತಂದಿದೆ. ಜನರು ಸಹ ಜಾಗೃತರಾಗಬೇಕು.
ರಾಜ್ಯದಲ್ಲಿ ವೀಕೆಂಡ್ ಕಫ್ರ್ಯೂ ಯಶಸ್ವಿಯಾಗಿದೆ. ಇದರ ರಿಸಲ್ಟ್ 10ರಿಂದ 14 ದಿವಸದ ನಂತರ ಗೊತ್ತಾಗಲಿದೆ ಎಂದರು.
ಮುಂದಿನ 10 ದಿನ ಕಠಿಣ ಇರಬಹುದು. ತದನಂತರ ಕಡಿಮೆಯಾಗುವ ಸಾಧ್ಯತೆ ಇದೆ. ಮೂರನೇ ಅಲೆಗೆ ಹೋಗಬಾರದು ಎಂದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು.
ಅದು ಎಲ್ಲರ ಜವಾಬ್ದಾರಿ ಎಂದು ಲಸಿಕೆ ಹಾಕಿಸಿಕೊಳ್ಳಿ ಎಂದು ಜನರಿಗೆ ಕರೆ ಕೊಟ್ಟರು.