ಮೈಸೂರು: “ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಡೋಂಗಿ. ಎಂಟು ವರ್ಷಗಳ ಕಾಲ ಜಿಎಸ್‌ಟಿ ಹೆಸರಿನಲ್ಲಿ ಜನರ ಮೇಲೆ ತೆರಿಗೆ ಹೊರೆ ಹೇರಿದ್ದೂ ಅವರೇ, ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ತೆರಿಗೆ ಕಡಿತದ ನಾಟಕವಾಡಿ ಜನರ ಕಣ್ಣಿಗೆ ಮಣ್ಣೆರಚಲು ಯತ್ನಿಸುತ್ತಿರುವುದೂ ಅವರೇ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೋಮವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಆಹಾರ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಮತ್ತು ಕೋಮುವಾದಿ ರಾಜಕಾರಣವನ್ನು ಕಟು ಶಬ್ದಗಳಲ್ಲಿ ಟೀಕಿಸಿದರು.
“ಹೆಚ್ಚುವರಿ GST ಹಣವನ್ನು ವಾಪಸ್ ನೀಡಿ”
ಜಿಎಸ್‌ಟಿ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸಿಎಂ, “ಜಿಎಸ್‌ಟಿ ಜಾರಿಗೊಳಿಸಿ ಶೇ. 18 ಮತ್ತು ಶೇ. 28ರಷ್ಟು ತೆರಿಗೆ ವಿಧಿಸಿ ಜನರ ಸುಲಿಗೆ ಮಾಡಿದಾಗ ನಿಮ್ಮ ಈ ಜನಪರ ಕಾಳಜಿ ಎಲ್ಲಿ ಹೋಗಿತ್ತು? ಎಂಟು ವರ್ಷಗಳ ಕಾಲ ದೇಶದ ಜನರಿಂದ ದೋಚಿದ ಹೆಚ್ಚುವರಿ ತೆರಿಗೆ ಹಣವನ್ನು ಈಗ ವಾಪಸ್ ಕೊಡುತ್ತೀರಾ, ಮೋದಿಯವರೇ?” ಎಂದು ನೇರವಾಗಿ ಸವಾಲು ಹಾಕಿದರು. “ನಾವು ಅಂದೇ ವಿಪರೀತ ತೆರಿಗೆಯನ್ನು ವಿರೋಧಿಸಿದ್ದೆವು. ಆದರೆ, ಅಂದು ಜನರ ಮಾತನ್ನು ಕೇಳದವರೇ ಇಂದು ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿದ್ದಾರೆ. ಇಂತಹ ನಾಜೂಕಿನ ‘ಟೋಪಿ’ ಹಾಕುವ ರಾಜಕಾರಣಕ್ಕೆ ಜನರು ಮರುಳಾಗಬಾರದು,” ಎಂದು ಜನತೆಗೆ ಕರೆ ನೀಡಿದರು.
ಬಡವರ ಹಸಿವು ನೀಗಿಸಿದ್ದು ನಾವು
ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಸಿದ್ದರಾಮಯ್ಯ, “ಬಡವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂಬ ಒಂದೇ ಕಾರಣಕ್ಕೆ ನಾವು ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತಂದೆವು. 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಮೂಲಕ ಹಸಿದವರ ಹೊಟ್ಟೆ ತಣಿಸುವ ಕೆಲಸ ಮಾಡಿದ್ದು ಈ ಸಿದ್ದರಾಮಯ್ಯ,” ಎಂದು ತಮ್ಮ ಸರ್ಕಾರದ ಸಾಧನೆಯನ್ನು ಜನರ ಮುಂದಿಟ್ಟರು.
ದೇವರ ಹೆಸರಲ್ಲಿ ದ್ವೇಷ ಹರಡುವ ಮೂರ್ಖರು
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ವಿರೋಧಿಸಿದ್ದವರ ವಿರುದ್ಧವೂ ಹರಿಹಾಯ್ದ ಸಿಎಂ, “ನನ್ನ ಹೆಸರಿನಲ್ಲೇ ‘ಸಿದ್ದ’ ಅಂದರೆ ಶಿವ, ‘ರಾಮ’ ಅಂದರೆ ವಿಷ್ಣು, ಹೀಗೆ ಇಬ್ಬರು ದೇವರುಗಳಿದ್ದಾರೆ. ನನಗೆ ದೇವರ ಮೇಲೆ ಅಪಾರ ಭಕ್ತಿ, ಪ್ರೀತಿ ಇದೆ. ಆದರೆ, ಕೆಲವರಂತೆ ದೇವರ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಹರಡುವ ಮೂರ್ಖ ನಾನಲ್ಲ,” ಎಂದರು.
ಈ ವಿರೋಧಕ್ಕೆ ನ್ಯಾಯಾಲಯದಲ್ಲೂ ಸೋಲಾಗಿದೆ ಎಂದು ಉಲ್ಲೇಖಿಸಿದ ಅವರು, “ಎರಡು ಬಾರಿ ಸಂಸದರಾಗಿದ್ದವರಿಗೆ ದಸರಾ ಒಂದು ನಾಡಹಬ್ಬ ಎನ್ನುವ ಜ್ಞಾನವೂ ಇಲ್ಲ. ಬಾನು ಮುಷ್ತಾಕ್ ಅವರನ್ನು ವಿರೋಧಿಸಿದವರಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ತೀವ್ರ ಮುಖಭಂಗವಾಗಿದೆ. ಸುಪ್ರೀಂಕೋರ್ಟ್ ಆ ಮೂರ್ಖರಿಗೆ ಸಂವಿಧಾನದ ಪೀಠಿಕೆಯನ್ನು ಓದಿಕೊಳ್ಳಿ ಎಂದು ಹೇಳುವ ಮೂಲಕ ತಕ್ಕ ಪಾಠ ಕಲಿಸಿದೆ,” ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಚಾಟಿ ಬೀಸಿದರು. “ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೋಗಿ ಅವರೇ ವಿಫಲರಾದರು. ಅವರಿಗಿಂತ ನಾನು ನೈಜ ಮತ್ತು ಉತ್ತಮ ಹಿಂದೂ,” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.








