ವಿಲಿಯಮ್ಸನ್ – ಕೊಹ್ಲಿ ಮೈದಾನದಲ್ಲಿ ಪ್ರತಿಸ್ಪರ್ಧಿಗಳು.. ಆದ್ರೂ ಅವರಿಬ್ಬರು ಬೆಸ್ಟ್ ಫ್ರೆಂಡ್ಸ್…!
ಕೇನ್ ವಿಲಿಯಮ್ಸನ್. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ. ತಂಡವನ್ನು ಮುನ್ನಡೆಸುವ ರೀತಿಯನ್ನು ನೋಡಿದಾಗ ಮಹೇಂದ್ರ ಸಿಂಗ್ ಧೋನಿಯವರನ್ನು ನೆನಪಿಸುತ್ತಾರೆ. ಸದಾ ತಾಳ್ಮೆಯ ಪ್ರತಿಕದಂತಿರುವ ವಿಲಿಯಮ್ಸನ್ ಅದ್ಭುತ ಬ್ಯಾಟ್ಸ್ ಮೆನ್. ಕಳೆದ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದ ರೀತಿಯೇ ಅತ್ಯುತ್ತಮ ನಿದರ್ಶನ. ಆದ್ರೆ ಫೈನಲ್ ನಲ್ಲಿ ಅಚ್ಚರಿಯ ಸೋಲು ಕಂಡ ನ್ಯೂಜಿಲೆಂಡ್ ರನ್ನರ್ ಅಪ್‍ಗೆ ಸಮಾಧಾನಪಟ್ಟುಕೊಂಡಿತ್ತು. ಆದ್ರೆ ಆ ಸೋಲು ವಿಲಿಯಮ್ಸನ್ ಅವರನ್ನು ಪದೇ ಪದೇ ಕಾಡುತ್ತಲೇ ಇರುತ್ತದೆಯಂತೆ.
ಇದೀಗ ವಿಲಿಯಮ್ಸನ್ ಅವರು ತನ್ನ ಹಾಗೂ ವಿರಾಟ್ ಕೊಹ್ಲಿಯವರ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ಹಾಗೇ ನೋಡಿದ್ರೆ ವಿರಾಟ್ ಮತ್ತು ವಿಲಿಯಮ್ಸನ್ ಇಬ್ಬರು ಕೂಡ ಒಂದೇ ವಯಸ್ಸಿನವರು. ಇಬ್ಬರು ಕೂಡ 2008ರ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಅಂದು ವಿರಾಟ್ ಟೀಮ್ ಇಂಡಿಯಾದ ನಾಯಕನಾದ್ರೆ, ವಿಲಿಯಮ್ಸನ್ ಅವರು ನ್ಯೂಜಿಲೆಂಡ್ ತಂಡದ ಸಾರಥ್ಯ ವಹಿಸಿದ್ದರು. ಆದ್ರೆ ಸೆಮಿಫೈನಲ್ ನಲ್ಲಿ ವಿರಾಟ್ ಪಡೆ ವಿಲಿಯಮ್ಸನ್ ಪಡೆಯನ್ನು ಪರಾಭವಗೊಳಿಸಿತ್ತು. ಕೊಹ್ಲಿ ಫೈನಲ್ ನಲ್ಲೂ ಅದ್ಭುತ ಪ್ರದರ್ಶನ ನೀಡಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆನಂತರ ಕೊಹ್ಲಿ ಮತ್ತು ವಿಲಿಯಮ್ಸನ್ ಅವರು ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿಸ್ಪರ್ಧಿಗಳಾಗಿ ಆಡಿದ್ದಾರೆ. ವಿಲಿಯಮ್ಸನ್ ನಾಯಕತ್ವಕ್ಕೂ ಕೊಹ್ಲಿ ನಾಯಕತ್ವಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಇಬ್ಬರ ಸ್ವಭಾವ ಕೂಡ ಭಿನ್ನ ಭಿನ್ನವಾಗಿದೆ. ಹೌದು, ನಾವು ಪ್ರತಿಸ್ಪರ್ಧಿಗಳಾಗಿ ಆಡುತ್ತಿದ್ದೇವೆ. ಸಣ್ಣ ವಯಸ್ಸಿನಿಂದಲೇ ಪರಿಚಯವಿದೆ. 19 ವಯೋಮಿತಿ ಕ್ರಿಕೆಟ್ ಟೂರ್ನಿ ಹಾಗೂ ಆ ನಂತರ ನಾವಿಬ್ಬರು ಪ್ರತಿಸ್ಪರ್ಧಿಗಳಾಗಿ ಆಡಿದ್ದೇವೆ. ವಿರಾಟ್ ಕೊಹ್ಲಿಯವರ ಕ್ರಿಕೆಟ್ ಬದುಕಿನ ಯಶಸ್ಸನ್ನು ನೋಡಿದಾಗ ಖುಷಿಯಾಗುತ್ತಿದೆ. ಅದ್ರಲ್ಲೂ ಕೆಲವು ವರ್ಷಗಳಿಂದ ಆಟದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇವೆ ಅಂತಾರೆ ವಿಲಿಯಮ್ಸನ್.
ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಐದು ಟಿ-ಟ್ವೆಂಟಿ ಪಂದ್ಯಗಳ ಕೊನೆಯ ಪಂದ್ಯದಲ್ಲಿ ಕೊಹ್ಲಿ ಮತ್ತು ವಿಲಿಯಮ್ಸನ್ ಆಡಿರಲಿಲ್ಲ. ಪಂದ್ಯದ ವೇಳೆ ಬೌಂಡರಿ ಲೈನ್ ನಲ್ಲಿ ಜೊತೆಯಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು. ಈ ಹಿಂದೆ ನ್ಯೂಜಿಲೆಂಡ್ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿತ್ತು. ಆನಂತರ ಭಾರತದ ವಿರುದ್ಧದ ಸರಣಿ ನಡೆದಾಗ ಸುದ್ದಿಗೋಷ್ಠಿಯಲ್ಲಿ ಭಾರತ ನಾಯಕ ವಿರಾಟ್ ಕೊಹ್ಲಿಯವರು ವಿಲಿಯಮ್ಸನ್ ಅವರ ಬೆನ್ನಿಗೆ ನಿಂತಿದ್ದರು.
ಪಂದ್ಯದ ಫಲಿತಾಂಶ ಯಾವಾಗಲೂ ನಾಯಕನ ಮೇಲೆ ಅಲವಂಬಿತವಾಗಿರುವುದಿಲ್ಲ. ಆದರೆ ತಂಡವನ್ನು ಯಾವ ರೀತಿ
ಮುನ್ನಡೆಸುತ್ತಾನೆ, ತಂಡದಿಂದ ಒಗ್ಗಟ್ಟಿನ ಪ್ರದರ್ಶನ ನೀಡುವುದಕ್ಕೆ ಯಾವ ರೀತಿ ಪ್ರೇರಣೆ ನೀಡುತ್ತಾನೆ ಎಂಬುದು ಮುಖ್ಯವಾಗಿರುತ್ತೆ. ಆತನಿಗೆ ತಂಡದ ಮೇಲೆ ಗೌರವ ಇರಬೇಕು, ಆಟಗಾರರ ಮೇಲೆ ನಂಬಿಕೆ ಇರಬೇಕು ಈ ಕೆಲಸವನ್ನು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮಾಡುತ್ತಿದ್ದಾರೆ. ಅವರು ನಾಯಕನಾಗಿ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ ವಿಲಿಯಮ್ಸನ್ ಸ್ಮಾರ್ಟ್ ಕ್ರಿಕೆಟರ್ ಅಂತ ವಿರಾಟ್ ಕೊಹ್ಲಿ ಹೇಳಿದ್ದರು.








