ವಿಂಬಲ್ಡನ್ 2021- ಆಶ್ಲೇಘ್ ಬಾರ್ಟಿ – ಆಂಜಲಿಕೊ ಕೆರ್ಬಾರ್, ಕರೊಲಿನಾ – ಸಬಾಲೆಂಕಾ ಸೆಮೀಸ್ ನಲ್ಲಿ ಫೈಟ್
ವಿಂಬಲ್ಡನ್ ಮಾಜಿ ಚಾಂಪಿಯನ್ ಜರ್ಮನಿಯ ಆಂಜಲಿಕೊ ಕೆರ್ಬಾರ್ ಅವರು 2021ರ ವಿಂಬಲ್ಡನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಂಜಲಿಕೊ ಕೆರ್ಬಾರ್ ಅವರು 6-2, 6-3ರಿಂದ ಚೆಕ್ ಗಣರಾಜ್ಯದ ಕರೊಲಿನಾ ಮುಚೊವಾ ಅವರನ್ನು ಸೋಲಿಸಿದ್ರು. ಆಂಜಲಿಕೊ ಕೆರ್ಬಾರ್ ಅವರು 2018ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಲ್ಲದೆ 2016ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಯುಎಸ್ ಓಪನ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು.
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೇಘ್ ಬಾರ್ಟಿ ಕೂಡ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಶ್ಲೇಘ್ ಬಾರ್ಟಿ ಅವರು 6-1, 6-3 ನೇರ ಸೆಟ್ ಗಳಿಂದ ಆಜ್ಲಾ ಟೊಮ್ಲಿಜಾನೊವಿಕ್ ಅವರನ್ನು ಸೋಲಿಸಿದ್ರು. ಸೆಮಿಫೈನಲ್ ನಲ್ಲಿ ಆಶ್ಲೇಘ್ ಬಾರ್ಟಿ ಮತ್ತು ಆಂಜಲಿಕೊ ಕೆರ್ಬಾರ್ ಅವರು ಹೋರಾಟ ನಡೆಸಲಿದ್ದಾರೆ.
ಮಹಿಳೆಯರ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತೆ ಬಲರಾಸ್ ನ ಆರ್ಯಾನಾ ಸಬಾಲೆಂಕಾ ಅವರು 6-4, 6-3ರಿಂದ ಟ್ಯುನೇಶಿಯಾದ ಒನ್ಸ್ ಜಬ್ಯೂರ್ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದ್ದಾರೆ.
ಹಾಗೇ ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೊವಾ ಅವರು 6-2, 6-2ರಿಂದ ಸ್ವಿಜರ್ ಲೆಂಡ್ ನ ವಿಕ್ಟೊರಿಜಾ ಗಾಲ್ಬಿಕ್ ಅವರನ್ನು ಪರಾಭವಗೊಳಿಸಿದ್ರು. ಎರಡನೇ ಸೆಮಿಫೈನಲ್ ನಲ್ಲಿ ಕರೊಲಿನಾ ಪ್ಲಿಸ್ಕೊವಾ ಮತ್ತು ಸಬಾಲೆಂಕಾ ಅವರು ಹೋರಾಟ ನಡೆಸಲಿದ್ದಾರೆ.








