ವಿಂಬಲ್ಡನ್ 2021 – ಆಶ್ಲೇಘ್ ಬಾರ್ಟಿ, ಕೆರ್ಬಾರ್ ಸುಲಭ ಗೆಲುವು.. ಎಲಿನಾ ಸ್ವಿಟೊಲಿನಾ ಹೋರಾಟ ಅಂತ್ಯ
ನಂಬರ್ ವನ್ ಆಟಗಾರ್ತಿ ಆಸ್ಟ್ರೇಲಿಯಾ ಆಶ್ಲೇಘ್ ಬಾರ್ಟಿ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೂರು ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಆಶ್ಲೇ ಬಾರ್ಟಿ ಅವರು 6-4, 6-3 ನೇರ ಸೆಟ್ ಗಳಿಂದ ರಷ್ಯಾದ ಅನ್ನಾ ಬ್ಲಿಂಕೊವಾ ಅವರನ್ನು ಸುಲಭವಾಗಿ ಮಣಿಸಿದ್ರು.
2019ರ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ಬಾರ್ಟಿ ಅವರು ವಿಂಬಲ್ಡನ್ ಪ್ರಶಸ್ತಿ ಗೆದ್ದಿಲ್ಲ. ಅಷ್ಟೇ ಅಲ್ಲ, ವಿಂಬಲ್ಡನ್ ನಲ್ಲಿ 16ರ ಘಟ್ಟ ಪ್ರವೇಶಿಸಿರುವುದು ಅವರು ಶ್ರೇಷ್ಠ ಸಾಧನೆಯಾಗಿದೆ. ಆದ್ರೆ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ.
ಮಹಿಳೆಯರ ಸಿಂಗಲ್ಸ್ ನ ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಆಂಜಲಿಕೊ ಕೆರ್ಬಾರ್ ಅವರು ಪ್ರಯಾಸದ ಜಯದೊಂದಿಗೆ ಮೂರು ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಕೆರ್ಬಾರ್ ಅವರು ಗೆಲುವಿಗಾಗಿ ಮೂರು ಗಂಟೆಗಳ ಕಾಲ ಹೋರಾಟ ನಡೆಸಿದ್ರು. ಅಂತಿಮವಾಗಿ ಕೆರ್ಬಾರ್ 7-5, 5-7, 6-4ರಿಂದ ಸ್ಪೇನ್ ನ ಸಾರಾ ಸೊರಿಬೆಸ್ ಅವರನ್ನು ಪರಾಭವಗೊಳಿಸಿದ್ರು.
ಆದ್ರೆ ವಿಶ್ವದ ಐದನೇ ಶ್ರೇಯಾಂಕಿತೆ ಹಾಗೂ ಟೂರ್ನಿಯ ಮೂರನೇ ಶ್ರೇಯಾಂಕಿತೆ ಉಕ್ರೇನ್ ನ ಎಲೆನಾ ಸ್ವಿಟೊಲಿನಾ ಅವರು ಎರಡನೇ ಸುತ್ತಿಗೆ ತನ್ನ ಹೋರಾಟವನ್ನು ಮುಗಿಸಿದ್ರು. ನೀರಸ ಆಟವನ್ನಾಡಿದ ಎಲಿನಾ ಸ್ವಿಟೊಲಿನಾ ಅವರು 3-6, 4-6ರಿಂದ ಪೊಲೆಂಡ್ ನ ಮಾಗ್ಡಾ ಲಿನೆಟೆ ಅವರಿಗೆ ತಲೆಬಾಗಿದ್ರು.
ಹಾಗೇ ಎರಡನೇ ಸುತ್ತಿನ ಮತ್ತೊಂದು ಸಿಂಗಲ್ಸ್ ನಲ್ಲಿ ಅಮೆರಿಕಾದ ಕೊಕೊ ಗೌಫ್ ಅವರು 6-4, 6-3ರಿಂದ ರಷ್ಯಾದ ಎಲೆನಾ ವೆಸ್ನಿನಾ ಅವರನ್ನು ಸೋಲಿಸಿದ್ರು.