ವಿಂಬಲ್ಡನ್ ಮಿಕ್ಸೆಡ್ ಡಬಲ್ಸ್ – ರೋಹಣ್ ಬೋಪಣ್ಣ – ಸಾನಿಯಾ ಮಿರ್ಜಾ ಮುನ್ನಡೆ
2021ರ ವಿಂಬಲ್ಡನ್ ಟೆನಿಸ್ ಟೂನಿಯ ಮಿಕ್ಸೆಡ್ ಡಬಲ್ಸ್ ಪಂದ್ಯವೊಂದು ಅವಿಸ್ಮರಣೀಯ ಸ್ಪರ್ಧೆಯೊಂದಕ್ಕೆ ಸಾಕ್ಷಿಯಾಯ್ತು.
ಹೌದು, ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ ನ ಅಂಗಣದಲ್ಲಿ ಭಾರತೀಯ ಸ್ಪರ್ಧಿಗಳು ಪರಸ್ಪರ ಹೋರಾಟ ನಡೆಸಿದ್ದ ಪಂದ್ಯ ಬಹಳ ರೋಚಕವಾಗಿತ್ತು. ಜೊತೆ ಅಷ್ಟೇ ಅವಿಸ್ಮರಣೀಯವೂ ಆಗಿತ್ತು.
ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಅನುಭವಿ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮಿಕ್ಸೆಡ್ ಡಬಲ್ಸ್ ನಲ್ಲಿ ಭಾರತದವರೇ ಆಗಿರುವ ರಾಮ್ ಕುಮಾರ್ ರಾಮನಾಥನ್ ಮತ್ತು ಅಂಕಿತಾ ರೈನಾ ವಿರುದ್ಧ ಆಡಿದ್ರು.
ಮಿಕ್ಸೆಡ್ ಡಬಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಅವರು 6-2, 7-6ರಿಂದ ರಾಮ್ ಕುಮಾರ್ ರಾಮನಾಥನ್ ಮತ್ತು ಅಂಕಿತಾ ರೈನಾ ಅವರನ್ನು ಸೋಲಿಸಿದ್ರು. ಮಿಕ್ಸೆಡ್ ಡಬಲ್ಸ್ ನಲ್ಲಿ ಒಂದೇ ದೇಶದ ಸ್ಪರ್ಧಿಗಳು ಪರಸ್ಪರ ವಿರುದ್ಧ ಆಡುತ್ತಿರುವುದು ವಿಂಬಲ್ಡನ್ ಇತಿಹಾಸದಲ್ಲೇ ಇದೇ ಮೊದಲ ಬಾರಿ.
ಇನ್ನೊಂದೆಡೆ ರಾಮ್ ಕುಮಾರ್ ರಾಮನಾಥನ್ ಅವರು ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪಂದ್ಯವನ್ನಾಡಿದ್ದ ಗೌರವಕ್ಕೂ ಪಾತ್ರರಾದ್ರು. ಸಿಂಗಲ್ಸ್ ನಲ್ಲಿ ಅರ್ಹತಾ ಸುತ್ತಿಗೆ ಪ್ರವೇಶಿಸಲು ರಾಮ್ ಕುಮಾರ್ ರಾಮನಾಥನ್ ಅವರು 21 ಬಾರಿ ಪ್ರಯತ್ನ ನಡೆಸಿದ್ದರು. ಇದೀಗ ಮಿಕ್ಸೆಡ್ ಡಬಲ್ಸ್ ನಲ್ಲಿ ತನ್ನ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯನ್ನು ಆಡಿದ್ದಾರೆ.
ಇನ್ನು ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಬೆಥಾನಿ ಮಾಟೆಕ್ ಅವರು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಆದ್ರೆ ರೋಹನ್ ಬೋಪಣ್ಣ ಮತ್ತು ದಿವಿಜಿ ಶರಣ್ ಅವರು ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.