ಪಾಕ್ ಕ್ರಿಕೆಟ್ ತಂಡದ ಬಾಯಿಗೆ ಬೀಗ ಹಾಕಿದ ಆಂಗ್ಲರು…! ಬಟ್ಲರ್ – ವೋಕ್ಸ್ ಆಟಕ್ಕೆ ತಲೆಬಾಗಿದ ಪಾಕಿಸ್ತಾನ
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಮೂರು ವಿಕೆಟ್‍ಗಳಿಂದ ಗೆದ್ದುಕೊಂಡಿದೆ. ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಅವರ ಸಮಯೋಚಿತ ಹಾಗೂ ಜಬರ್‍ದಸ್ತ್ ಆಟದ ನೆರವನ್ನು ಪಡೆದ ಇಂಗ್ಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಪಡೆಯಲು ಸಾಧ್ಯವಾಯ್ತು.
ಗೆಲ್ಲಲು 277 ರನ್ ಗಳ ಸವಾಲನ್ನು ಪಡೆದ ಇಂಗ್ಲೆಂಡ್ 117 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಅವರು ಆರನೇ ವಿಕೆಟ್ 139 ರನ್ ಪೇರಿಸಿ ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿಗಳಾದ್ರು. ಜೋಸ್ ಬಟ್ಲರ್ 101 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ ಆಕರ್ಷಕ 75 ರನ್ ದಾಖಲಿಸಿದ್ರು. ಇನ್ನೊಂದೆಡೆ ಅಜೇಯ 84 ರನ್
ದಾಖಲಿಸಿದ್ದ ಕ್ರಿಸ್ ವೋಕ್ಸ್ 120 ಎಸೆತಗಳಲ್ಲಿ 10 ಬೌಂಡರಿಗಳನ್ನು ಸಿಡಿಸಿದ್ರು. ಆಲ್ ರೌಂಡ್ ಆಟವನ್ನಾಡಿದ ಕ್ರಿಸ್ ವೋಕ್ಸ್ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
ಇದಕ್ಕೂ ಮೊದಲು ಪಾಕಿಸ್ತಾನ 169 ರನ್ ಗಳಿಗೆ ತನ್ನ ಎರಡನೇ ಇನಿಂಗ್ಸ್ ನಲ್ಲಿ ಆಲೌಟ್ ಆಗಿತ್ತು. ಮೊದಲ ಇನಿಂಗ್ಸ್ ನಲ್ಲಿ ಪಾಕಿಸ್ತಾನ 326 ರನ್ ಗಳಿಸಿತ್ತು. ಹಾಗೇ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 219 ರನ್ ಗಳಿಸಿ ಇನಿಂಗ್ಸ್ ಹಿನ್ನಡೆ ಅನುಭವಿಸಿತ್ತು. ಎರಡನೇ ೀ ಇನಿಂಗ್ಸ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 277 ರನ್ ಪೇರಿಸಿ ಗೆಲುವಿನ ನಗೆ ಚೆಲ್ಲಿತ್ತು.








