ಚಿಕ್ಕಬಳ್ಳಾಪುರ: ಇತ್ತೀಚೆಗೆ ಮದುವೆಗೆ ವಧು ಸಿಗುತ್ತಿಲ್ಲ ಎಂದು ಯುವಕರು ಪರಿತಪಿಸುತ್ತಿದ್ದಾರೆ. ಆದರೆ, ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ವಂಚಿಸುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಲ್ಲೊಬ್ಬ ಮಹಿಳೆ ಮದುವೆಯ ನೆಪದಲ್ಲಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಕೋಮಲಾ ಬಂಧಿತ ಮಹಿಳೆ. ಈ ಮಹಿಳೆಯ ಪತಿ ಸುಮಾರು 7 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಆನಂತರ ಇವಳು ಮದುವೆಯಾಗುವುದನ್ನೇ ಕಾಯಕ ಮಾಡಿಕೊಂಡಿದ್ದಾಳೆ. ವಿಲಾಸಿ ಜೀವನಕ್ಕಾಗಿ ಮದುವೆಯಾಗುವುದಾಗಿ ನಂಬಿಸಿ ಪುರುಷರ ಬಳಿ ಹಣ ಪಡೆದು ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾಳೆ. ಸದ್ಯ ಈ ಮಹಿಳೆಯನ್ನು ಚಿಕ್ಕಬಳ್ಳಾಪುರ ಸಿಇಎನ್ (ಸೆನ್) ಪೊಲೀಸರು ಬಂಧಿಸಿದ್ದಾರೆ.
ಈ ಮಹಿಳೆ ಗೌರಿಬಿದನೂರು ನಗರದ ರಾಘವೇಂದ್ರ ಎಂಬವರನ್ನ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಆತನಿಂದ 7.40 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾಳೆ. ಸದ್ಯ ರಾಘವೇಂದ್ರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಮಹಿಳೆಯು ಹಲವಾರು ಪುರುಷರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿವೆ.
ಗಂಡ ಕೆಪಿಟಿಸಿಲ್ ನೌಕರನಾಗಿದ್ದ. 2017 ರಲ್ಲಿ ಮರಣ ಹೊಂದಿದ್ದಾರೆ. ಹೀಗಾಗಿ 6 ಕೋಟಿ ಪರಿಹಾರದ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದಳು ಎನ್ನಲಾಗಿದೆ.








