ಇತ್ತೀಚಿಗೆ ಒಂದು ಮದ್ವೆಗೆ ಹೋಗಿದ್ದೆ. ಶ್ರೀಮಂತರ ಮನೆ ಹುಡುಗಿ ಮದ್ವೆ. ಹಾಗೇ ಕಣ್ಣು ಆಡಿಸುವಾಗ ಹುಡುಗಿ ತಾಯಿ ಮದ್ವೆ ಮಂಟಪದ ಒಂದು ಮೂಲೇಲಿ ಕಣ್ಣೀರು ಸುರಿಸ್ತಾ ಕೂತಿದ್ರು. ಆಮೇಲೆ ಗೊತ್ತಾಯಿತು ಅವರು ವಿಧವೆ ಆಂತ. ಹಾಗೇ ಆಲೋಚನೆ ಮಾಡ್ತಾ ಇರೋವಾಗ ಅನ್ನಿಸ್ತು ಆ ತಾಯಿಗೆ ಧಾರೆ ಎರೆಯುವ ಭಾಗ್ಯ ಯಾಕೆ ಇಲ್ಲ ಅಂತ. ಒಂಬತ್ತು ತಿಂಗಳು ಹೆತ್ತು ಹೊತ್ತು ಮಗುವನ್ನು ಶಿಕ್ಷಿತ ಹೆಣ್ಣಾಗಿ ಮಾಡಿ ಅವಳನ್ನು ಅವಳ ಹುಡುಗನಿಗೆ ಧಾರೆ ಎರೆಯಲು ಯಾಕೆ ಅವಕಾಶ ಇಲ್ಲ ಅನ್ನುವುದು ಯಕ್ಷ ಪ್ರಶ್ನೆ? ನಮ್ಮ ಹಿಂದೂ ಸಮಾಜ ಸತಿ ಪದ್ಧತಿ,ಬಾಲ್ಯ ವಿವಾಹ, ಮಲ ಹೊರುವ ಪದ್ಧತಿ,ಅಸ್ಪೃಶ್ಯತೆಯಂಥಹ ಹಲವಾರು ಅಸಾಮಾಜಿಕ ಮತ್ತು ಅನಿಷ್ಟ ಪದ್ಧತಿಯನ್ನು ತೊಲಗಿಸಲು ಹಲವಾರು ಸಮಾಜ ಸುಧಾರಕರನ್ನು ಕಂಡಿದೆ ಆದ್ರೆ ವಿಧವೆಯ ಮನಸ್ಸಿನ ನೋವನ್ನು ತೊಲಗಿಸಲು ಯಾಕೆ ಯಾವುದೇ ಸ್ವಯಂ ಘೋಷಿತ ಧರ್ಮ ಮುಖಂಡರು,ಧರ್ಮವನ್ನು ಒಡೆಯಲು ತುದಿಗಾಲಲ್ಲಿ ನಿಂತಿರುವ ಕೆಲವು ಸ್ವಾಮೀಜಿಗಳು, ಕಾವಿ ಮತ್ತು ಶ್ವೇತ ವಸ್ತ್ರಧಾರಿ ರಾಜಕೀಯ ಮುಖಂಡರು ಇದರ ಪರಿಹಾರದ ಬಗ್ಗೆ ಯಾಕೆ ಪ್ರಯತ್ನ ಪಡ್ತಾ ಇಲ್ಲ ಅನ್ನುವುದು ದೊಡ್ಡ ಪ್ರಶ್ನೆ.
ಹಿಂದೂ ಸಮಾಜದಲ್ಲಿನ ಮಹಿಳೆ ತನ್ನ ಇನಿಯನನ್ನು ಕಳೆದು ಕೊಂಡಾಗ ಅವಳ ಹಣೆಯ ಪವಿತ್ರ ಕುಂಕುಮ ಅಳಿಸಿ,ಬಳೆ ಒಡೆದು ಕಾಲುಂಗುರ ತೆಗೆಸಿ ಅವಳನ್ನು ನಿರಾಭರಣ ಆತ್ಮವಾಗಿ ಮಾಡುತ್ತಾರೆ. ಖುಷಿಯ ವಿಷಯ ಎಂದರೆ ಇತ್ತೀಚಿಗೆ ಈ ಅನಿಷ್ಟ ಪದ್ಧತಿ ಕಡಿಮೆ ಆಗ್ತಾ ಇರೋದು. ಮಹಿಳೆಗೆ ಅವಳದ್ದೇ ಆದ ಸ್ವಾಭಿಮಾನ ಮತ್ತು ಹೆಂಗಸಿನ ಗುರುತು ಇರಬೇಕು. ಅದು ಉಡುಗೆ ತೊಡುಗೆಯಲ್ಲಿ ಆಗಲಿ ಅಥವಾ ಅವಳ ದೈನಂದಿನ ಮತ್ತು ಧಾರ್ಮಿಕ ಆಚರಣೆಯಲ್ಲಿ ಆಗಿರ್ಲಿ.
ಇತ್ತೀಚಿಗೆ ಒಂದು ದಿನ ಪತ್ರಿಕೆಯಲ್ಲಿ ಅತ್ತೆಯೇ ತನ್ನ ಸೊಸೆಗೆ ತಾನೇ ಕೈಯಾರೆ ಮದ್ವೆ ಮಾಡಿಸಿಕೊಟ್ಟು ಆದರ್ಶ ಅತ್ತೆಯಾಗಿ ಸಮಾಜಕ್ಕೆ ಮಾದರಿ ಅದದನ್ನು ಕಂಡಿದ್ದೇವೆ. ಒಬ್ಬಳು ಅತ್ತೆ ತನ್ನ ಸೊಸೆಯನ್ನು ಮಗಳ ತರಹ ಮತ್ತು ಅದೇ ಸೊಸೆ ತನ್ನ ಅತ್ತೆಯನ್ನು ತನ್ನ ತಾಯಿಯ ತರಹ ಕಂಡರೆ ಯಾವ ಮನೆಯಲ್ಲೂ ಅತ್ತೆ-ಸೊಸೆ ಜಗಳ ಬರೋದಕ್ಕೆ ಸಾಧ್ಯವೇ ಇಲ್ಲ!
ಸಮಾಜದಲ್ಲಿ ಮಹಿಳಾ ಸಬಲೀಕರಣ ಮತ್ತು ಶಿಕ್ಷಣ ವಿಧವೆ ಮಹಿಳೆಯನ್ನು ತನ್ನ ಸ್ವಂತ ಕಾಲಮೇಲೆ ನಿಲ್ಲುವಂತೆ ಮಾಡಿದೆ ಮತ್ತು ವಿಧವಾ ವೇತನದಂತಹ ಸವಲತ್ತುಗಳು ಕೂಡಾ ಇವೆ.ಆದರೆ ಧಾರ್ಮಿಕ ಗೊಡ್ಡು ಸಂಪ್ರದಾಯಗಳನ್ನು ಮೆಟ್ಟಿ ಮುಂದುವರಿಯುವಲ್ಲಿ ನಮ್ಮ ಸಮಾಜ ಇನ್ನೂ ಅಜ್ಜನ ಆಲದ ಮರಕ್ಕೆ ಹಗ್ಗ ಹಾಕಿ ನೇಲುತ್ತಾ ಇದೆ. ಎಲ್ಲಿ ನಾರಿ ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ವಾಸವಾಗ್ತಾರೆ ಎಂಬ ಉಕ್ತಿಯ ಹಾಗೇ ಯಾವಾಗ ಒಬ್ಬಳು ವಿಧವೆ ತಾಯಿಗೆ ತನ್ನ ರಕ್ತ ಹಂಚಿ ಬೆಳೆದ ಮಗಳಿಗೆ ಧಾರೆ ಎರೆಯುವ ಅವಕಾಶ ಸಿಗುವುದೋ ಅವಾಗ ಅವಳ ಜೀವನ ಸಾರ್ಥಕ ಆಗುತ್ತದೆ ಎಂಬ ಮಾತಿಗೆ ಪೂರಕವಾಗಿ ನಮ್ಮ ಧಾರ್ಮಿಕ ಮುಖಂಡರು ಈ ಬಗ್ಗೆ ಯೋಚಿಸಿ ಈ ಗೊಡ್ಡು ಸಂಪ್ರದಾಯ ತೊಲಗಿಸಿ,ಅವಳ ಜಾಗದಲ್ಲಿ ನಿಂತು ಒಮ್ಮೆ ಆಲೋಚಿಸಿ ಹೊಸ ಪೀಳಿಗೆ ಹೊಸ ಸಂಪ್ರದಾಯವನ್ನು ಹಾಕಿ ಕೊಟ್ಟರೆಷ್ಟು ಚೆನ್ನ?
-ಪ್ರಶಾಂತ್ ಮುದ್ರಾಡಿ.








