ವಿವಾಹಿತ ಭಾರತೀಯರಲ್ಲಿ ಶೇ 55ರಷ್ಟು ಮಂದಿ ತಮ್ಮ ಸಂಗಾತಿಗೆ ವಿಶ್ವಾಸದ್ರೋಹ ಎಸಗಿರುತ್ತಾರೆ. ಅವರಲ್ಲಿ ಶೇ 56ರಷ್ಟು ಮಂದಿ ಮಹಿಳೆಯರಿದ್ದಾರೆ ಎಂದು ಡೇಟಿಂಗ್ ಆಪ್ ಗ್ಲೀಡೆನ್ ನಡೆಸಿದ ಸಮೀಕ್ಷೆ ತಿಳಿಸಿದೆ. 25 ರಿಂದ 50 ವರ್ಷ ವಯಸ್ಸಿನ 1,525 ವಿವಾಹಿತ ಭಾರತೀಯರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಪುಣೆ, ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ಈ ಸಮೀಕ್ಷೆ ನಡೆದಿದೆ.
ಒಂದೇ ಸಮಯಕ್ಕೆ ಒಬ್ಬರೊಂದಿಗೆ ಪ್ರೀತಿಯಲ್ಲಿ ಬೀಳುವುದು ಸಾಧ್ಯ ಎಂದು ಶೇ 48ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇ 46ರಷ್ಟು ಮಂದಿ, ತಮ್ಮ ಸಂಗಾತಿಯೊಂದಿಗೆ ಪ್ರೀತಿಯಲ್ಲಿ ಇರುವಾಗಲೇ ಅವರನ್ನು ವಂಚಿಸಲೂ ಸಾಧ್ಯ ಎಂದು ಹೇಳಿದ್ದಾರೆ.
ವಿವಾಹೇತರ ಸಂಬಂಧ ಹೆಚ್ಚು

ಈ ಸಮೀಕ್ಷೆಯಲ್ಲಿ ತಮ್ಮ ಜೀವನ ಸಂಗಾತಿಯಲ್ಲದೆ ಬೇರೊಬ್ಬರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವುದಾಗಿ ಶೇ 49ರಷ್ಟು ವಿವಾಹಿತರು ಒಪ್ಪಿಕೊಂಡಿದ್ದಾರೆ. ಶೇ 41ರಷ್ಟು ಮಹಿಳೆಯರು ತಮ್ಮ ಪತಿಯಲ್ಲದೆ ಬೇರೆಯವರ ಜತೆಗೆ ಆಗಾಗ ಲೈಂಗಿಕ ಸಂಬಂಧ ಹೊಂದುವುದನ್ನು ಒಪ್ಪಿಕೊಂಡಿದ್ದಾರೆ. ಈ ಪ್ರಮಾಣ ಪುರುಷರಲ್ಲಿ ಶೇ 26ರಷ್ಟಿದೆ. ತಮ್ಮ ಮದುವೆಯಾಚೆ ಆತ್ಮೀಯ ಸಂಬಂಧವನ್ನು ಹೊಂದಿರುವುದಾಗಿ ಶೇ 53ರಷ್ಟು ವಿವಾಹಿತ ಮಹಿಳೆಯರು ತಿಳಿಸಿದ್ದರೆ, ಶೇ 43ರಷ್ಟು ಪುರುಷರು ಹೀಗೆ ಆಪ್ತ ಸಂಬಂಧ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ.
ಡೇಟಿಂಗ್ ಆಪ್ ಬಳಸುವುದರಲ್ಲಿ ಮಹಿಳೆಯರೇ ಹೆಚ್ಚು!

ಭಾರತದ ಮೊದಲ ವಿವಾಹೇತರ ಡೇಟಿಂಗ್ ಆಪ್ ‘ಗ್ಲೀಡೆನ್’ ಬಳಸುವವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ದಾಂಪತ್ಯ ಸಂಬಂಧಗಳಿಗೆ ಯಾವುದೇ ಧಕ್ಕೆ ಬಾರದಂತೆ ಸಮಾನ ಮನಸ್ಕ ವ್ಯಕ್ತಿಗಳ ಜತೆಗೆ ಹೊಸ ಪ್ರೇಮ ಕಥೆ ಹೊಸೆಯಲು ಉತ್ತಮವಾದ ವಾತಾವರಣವನ್ನು ಒದಗಿಸುತ್ತದೆ. ಮಹಿಳೆಯರು ಸಂಪೂರ್ಣ ರೊಮ್ಯಾಂಟಿಕ್ ಅನುಭವವನ್ನು ತಮ್ಮ ಖಾಸಗಿತನದ ರಕ್ಷಣೆಯೊಂದಿಗೆ ಪಡೆದುಕೊಳ್ಳಬಹುದು. ಹಾಗೂ ಅವರ ರಹಸ್ಯ ಸುರಕ್ಷಿತವಾಗಿಯೇ ಇರುತ್ತದೆ. ಈ ಕಾರಣದಿಂದಾಗಿಯೇ ಗ್ಲೀಡೆನ್ ಹೆಚ್ಚಿನ ಮಹಿಳೆಯರನ್ನು ಪ್ರತಿ ದಿನ ಆಕರ್ಷಿಸುತ್ತಿದೆ’ ಎಂದು ಆಪ್‌ನ ಮಾರ್ಕೆಟಿಂಗ್ ಡೈರೆಕ್ಟರ್ ಸೋಲೆನ್ ಪೈಲೆಟ್ ಹೇಳಿದ್ದಾರೆ.








