World Cup 2022 | ರಣರೋಚಕ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ..!
2022ರ ಮಹಿಳಾ ವಿಶ್ವಕಪ್ ನಿಂದ ಭಾರತ ಕ್ರಿಕೆಟ್ ತಂಡ ಹೊರಬಿದ್ದಿದೆ. ದಕ್ಷಣ ಆಫ್ರಿಕಾ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆ ಕೊನೆಯ ಓವರ್ ನಲ್ಲಿ ಸೋಲುಂಡಿದೆ. ಆ ಮೂಲಕ 2022ರ ವಿಶ್ವಕಪ್ ಅಭಿಯಾನವನ್ನು ಮುಗಿಸಿದೆ.
ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಕ್ತು. ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ದಕ್ಷಿಣ ಆಫ್ರಿಕಾದ ಬೌಲರ್ಗಳನ್ನು ಬೆಂಡತ್ತಿದ್ದರು.
ಶಫಾಲಿ ಕೇವಲ 46 ಎಸೆತಗಳಲ್ಲಿ 53 ರನ್ಗಳಿಸಿ ರನೌಟ್ ಆದರು. ಇವರನ್ನ ಭಾಟಿಯಾ ಅನುಸರಿಸಿದರು. ನಂತರ ಸ್ಮೃತಿ ಮಂದಾನಾ ಮತ್ತು ನಾಯಕಿ ಮಿಥಾಲಿ ರಾಜ್ 80 ರನ್ಗಳ ಜೊತೆಯಾಟ ಕಟ್ಟಿದರು.
ಈ ವೇಳೆ 71 ರನ್ಗಳಿಸಿದ್ದ ಮಂದಾನಾ ಔಟಾದರು. ಆಗ ಕ್ರೀಸ್ ಗೆ ಬಂದ ಹರ್ಮನ್ ಪ್ರಿತ್ ಕೌರ್, ಮಿಥಾಲಿ ಜೊತೆ ಸೇರಿ 58 ರನ್ ಗಳ ಜೊತೆಯಾಟವಾಡಿದ್ರು. ಆದ್ರೆ ಮಿಥಾಲಿ ಆಟ 68ಕ್ಕೆ ಅಂತ್ಯವಾಯ್ತು.
ಸ್ಲಾಗ್ ಓವರ್ ಗಳಲ್ಲಿ ಮಿಂಚಿದ ಹರ್ಮನ್ 48ಕ್ಕೆ ವಿಕೆಟ್ ಒಪ್ಪಿಸಿದರು. ಭಾರತ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್ಗಳಿಸಿತು.
ಈ ಗುರಿಯನ್ನ ಬೆನ್ನತ್ತಿದ ದಕ್ಷಿಣಾಫ್ರಿಕಾ ಆರಂಭದಲ್ಲಿಯೇ ಲಿಝೆಲ್ ಲಿ ವಿಕೆಟ್ ಕಳೆದುಕೊಂಡಿತು. ಆದರೆ ಲಾರ ವೋಲ್ವಾರ್ಡ್ ಮತ್ತು ಲಾರಾ ಗೂಡಲ್ ಭಾರತೀಯ ಬೌಲರ್ಗಳ ಬೆವರಿಳಿಸಿದರು.
ಈ ಜೋಡಿ 2ನೇ ವಿಕೆಟ್ಗೆ 134 ರನ್ಗಳನ್ನು ಸೇರಿಸಿತು. ಗೂಡಲ್ 49ಕ್ಕೆ ಔಟ್ ಆದ್ರು. ವೊಲ್ವಾರ್ಡ್ 80 ರನ್ಗಳಿಸಿದ್ದ ವೇಳೆ ಹರ್ಮನ್ ಪ್ರಿತ್ಗೆ ವಿಕೆಟ್ ಒಪ್ಪಿಸಿದರು. ಟ್ರಯನ್ 9 ಎಸೆತಗಳಲ್ಲಿ 17 ರನ್ಗಳಿಸಿ ಪಂದ್ಯದ ಗತಿಯನ್ನ ಬದಲಿಸಿದರು.
ದಕ್ಷಿಣ ಆಫ್ರಿಕಾಗೆ ಪಂದ್ಯ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 7 ರನ್ಗಳು ಬೇಕಿತ್ತು. ದೀಪ್ತಿ ಶರ್ಮಾ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ 1 ರನ್ ಬಂತು. 2ನೇ ಎಸೆತದಲ್ಲಿ 2 ರನ್ ಕದಿಯುವ ಆತುರದಲ್ಲಿ ತ್ರಿಷಾ ಚೆಟ್ಟಿ ರನೌಟ್ ಆದರು. 3ನೇ ಎಸೆತದಲ್ಲಿ ಡು ಪ್ರಿಝ್ 1 ರನ್ ಪಡೆದುಕೊಂಡರು.
4ನೇ ಎಸೆತದಲ್ಲಿ ಶಬ್ನಿಮ್ ಇಸ್ಮಾಯಿಲ್ 1 ರನ್ ಪಡೆದುಕೊಂಡರು. 5ನೇ ಎಸೆತದಲ್ಲಿ ಡು ಪ್ರಿಝ್ ಹರ್ಮನ್ ಕೈಗೆ ಕ್ಯಾಚ್ ಕೊಟ್ಟರು. ಆದರೆ ಅದು ನೋ ಬಾಲ್ ಆಗಿತ್ತು.
ನೋ ಬಾಲ್ ಸೇರಿ ದಕ್ಷಿಣ ಆಫ್ರಿಕಾಗೆ 2 ರನ್ ಸೇರ್ಪಡೆಯಾಯ್ತು. ಕೊನೆಯ ಎರಡು ಎಸೆತದಲ್ಲಿ 2 ರನ್ಗಳ ಅವಶ್ಯಕತೆ ಇತ್ತು. ಅಂತಿಮವಾಗಿ ಡು ಪ್ರಿಝ್ ದಕ್ಷಿಣ ಆಫ್ರಿಕಾಕ್ಕೆ ಗೆಲುವು ತಂದುಕೊಟ್ಟರು.