ನವದೆಹಲಿ: ಕೊರೊನಾ ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಲಾಕ್ ಡೌನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಗೈಡ್ ಲೈನ್ಸ್ ನೀಡಿದೆ ಎನ್ನಲಾದ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಸ್ ಆಗುತ್ತಿದೆ. ಅನೇಕರು ವಾಟ್ಸಾಪ್ ಮೂಲಕ ಈ ಸಂದೇಶವನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ಇದರ ಸತ್ಯಾಸತ್ಯತೆ ಗೊತ್ತಾಗಿದ್ದು, ಕೊರೊನಾ ವೈರಸ್ ನಿಯಂತ್ರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ನೀಡಿತ್ತು ಎನ್ನಲಾದ ಗೈಡ್ ಲೈನ್ಸ್ ಸುಳ್ಳು ಸುದ್ದಿ ಅನ್ನೋದು ಬಹಿರಂಗವಾಗಿದೆ. ಲಾಕ್ ಡೌನ್ ಸಂಬಂಧ ಅಂತಹ ಯಾವುದೇ ಪ್ರೊಟೋಕಾಲ್ಸ್ ಹೊರಡಿಸಿಲ್ಲ ಅಂತ ಸ್ವತಃ ಡಬ್ಲ್ಯೂಎಚ್ಓ ಸ್ಪಷ್ಟಪಡಿಸಿದೆ.
ವೈರಲ್ ಆಗುತ್ತಿದ್ದ ಸ್ಟೋರಿ ಏನು?
ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ಡಬ್ಲ್ಯೂಎಚ್ ಒ , ಲಾಕ್ ಡೌನ್ ಪೀರಿಯಡ್ಸ್ ಬಗ್ಗೆ ಕೆಲವು ಮಾರ್ಗದರ್ಶನಗಳನ್ನು ನೀಡಿದೆ. ನಾಲ್ಕು ಹಂತಗಳಲ್ಲಿ ಲಾಕ್ ಡೌನ್ ಕೈಗೊಂಡು, ಮೊದಲ ಹಂತದಲ್ಲಿ ಒಂದು ದಿನ ಲಾಕ್ ಡೌನ್, ಎರಡನೇ ಹಂತದಲ್ಲಿ 21 ದಿನಗಳ ಲಾಕ್ ಡೌನ್, ನಂತರ 5 ದಿನ ರಿಲ್ಯಾಕ್ಸ್, ಬಳಿಕ ಮತ್ತೆ ಮೂರನೇ ಹಂತದಲ್ಲಿ 28 ದಿನಗಳ ಲಾಕ್ ಡೌನ್, ಆನಂತರ 5 ದಿನ ಸಡಿಲ, ನಾಲ್ಕನೇ ಹಂತದಲ್ಲಿ 15 ದಿನಗಳ ಲಾಕ್ ಡೌನ್ ಘೋಷಿಸಲು ಸೂಚನೆ ನೀಡಿದೆ. ಇದರ ಅನುಸಾರವಾಗಿ ಈಗಾಗಲೇ ಭಾರತ ಸರ್ಕಾರ, ಒಂದು ದಿನದ ಮಟ್ಟಿಗೆ ಅಂದ್ರೆ ಮಾರ್ಚ್ 22 ರಂದು ಜನತಾ ಕರ್ಪ್ಯೂ ಮೂಲಕ ಬಂದ್ ಘೋಷಿಸಿತ್ತು. ಆನಂತರ 2ನೇ ಹಂತವಾಗಿ ಮಾರ್ಚ್ 24 ರಿಂದ ಏಪ್ರಿಲ್ 14ರವರೆಗೂ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಏಪ್ರಿಲ್ 15 ರಿಂದ 5 ದಿನ ಲಾಕ್ ಡೌನ್ ಸಡಿಲಿಸಲಾಗುತ್ತೆ, ಬಳಿಕ ಮತ್ತೆ ಏಪ್ರಿಲ್ 20 ರಿಂದ ಮೇ 18ರವರೆಗೆ ಲಾಕ್ ಡೌನ್ ಘೋಷಿಸಲಾಗುತ್ತೆ, ಈ ವೇಳೆ ಒಂದು ಕೇಸ್ ಪತ್ತೆಯಾಗದಿದ್ರೆ ಲಾಕ್ ಡೌನ್ ತೆರವುಗೊಳಿಸಲಾಗುತ್ತೆ. ಇಲ್ಲದಿದ್ರೆ, 5 ದಿನ ರಿಲ್ಯಾಕ್ಸ್ ನೀಡಿ ಮತ್ತೆ ಮೇ 25 ರಿಂದ ಜೂನ್ 10ರವರೆಗೂ ಲಾಕ್ ಡೌನ್ ಘೋಷಿಸಲಾಗುತ್ತೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಡಬ್ಲ್ಯೂಎಚ್ ಓ, ಇಂತಹ ಯಾವುದೇ ಪ್ರೋಟೋಕಾಲ್ ನಾವು ನೀಡಿಲ್ಲ ಅಂತ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ.








